ಹರಿಪ್ರಸಾದ್ ವಿರುದ್ಧ ಬಿಜೆಪಿ ಕಿಡಿ

ಬೆಂಗಳೂರು,ಜೂ,೯:ಆರ್‌ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೇವಾರ್ ಹೆಸರು ಹೇಳುವ ಯೋಗ್ಯತೆ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ರವರಿಗೆ ಇಲ್ಲ ಎಂದು ಬಿಜೆಪಿ ಹೇಳಿದೆ.ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್‌ರವರು ನಿನ್ನೆ ಶಿವಮೊಗ್ಗದಲ್ಲಿ ಮಾತನಾಡಿದ್ದ ಸಂದರ್ಭದಲ್ಲಿ ಶಿಕ್ಷಣ ಸೇರಿದಂತೆ ಸರ್ಕಾರದ ಯಾವ ಇಲಾಖೆಯಲ್ಲೂ ಸಂಘ ಪರಿವಾರದ ಸಿದ್ಧಾಂತಗಳು ನುಸುಳಲು ಅವಕಾಶ ನೀಡುವುದಿಲ್ಲ. ಎಡಗೇವಾರ್ ತರಹದ ರಣಹೇಡಿಗಳ ವಿಚಾರ ಇನ್ನು ಮುಂದೆ ಪಠ್ಯದಲ್ಲಿರುವುದಿಲ್ಲ ಎಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಬಿ.ಕೆ. ಹರಿಪ್ರಸಾದ್ ವಿರುದ್ಧ ಕಿಡಿಕಾರಿ, ಅಪ್ರತಿಮ ದೇಶಭಕ್ತರ ಹೆಸರು ಹೇಳುವ ಯೋಗ್ಯತೆಯನ್ನು ಹರಿಪ್ರಸಾದ್‌ರವರಿಗೆ ಇಲ್ಲ ಎಂದು ಟೀಕಿಸಿದೆ.
ಹೆಡಗೇವಾರ್‌ರವರು ಆರ್‌ಆರ್‌ಎಸ್‌ಎಸ್‌ನ ಸಂಸ್ಥಾಪಕರು, ಅಪ್ರತಿಮ ದೇಶಭಕ್ತರು ಎಂದು ಹೇಳಿರುವ ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಅಲ್ಪಜ್ಞಾನಿಗಳು, ಮತಿಗೇಡಿಗಳು ಬಾಲ ಬಿಚ್ಚುತ್ತಿದ್ದಾರೆ. ಅಂದ ಹಾಗೆ ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿ ಇದುವರೆಗೂ ಮಾಡಿದ ಒಂದೇ ಒಂದು ಒಳ್ಳೆಯ ಕೆಲಸವೆಂದರೆ ಮಾನಸಿಕ ಅಸ್ವಸ್ಥರಾಗಿರುವ ಬಿ.ಕೆ. ಹರಿಪ್ರಸಾದ್‌ರವರನ್ನು ಸಚಿವ ಸಂಪುಟದಿಂದ ದೂರವಿಟ್ಟದ್ದು ಎಂದು ಬಿಜೆಪಿ ಟ್ವೀಟ್‌ನಲ್ಲಿ ಹೇಳಿದೆ.