ಹರಿದ ಜೀನ್ಸ್ ಬಗ್ಗೆ ಹೇಳಿಕೆ: ರಾವತ್‌ಗೆ ಇರಾನಿ ತಿರುಗೇಟು

ಹೊಸದಿಲ್ಲಿ, ಮಾ.೨೬- ಜನರು ಹೇಗೆ ಉಡುಗೆ ತೊಡಬೇಕು, ಏನು ತಿನ್ನಬೇಕು ಎಂಬ ಕುರಿತು ರಾಜಕಾರಣಿಗಳು ಮಾತನಾಡುವುದು ಸರಿಯಲ್ಲ. ಅದು ಅವರ ಕೆಲಸವೂ ಅಲ್ಲ ಎಂದು ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಗುರುವಾರ ಹೇಳಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಇತ್ತೀಚೆಗೆ ಹರಿದ ಜೀನ್ಸ್ ಧರಿಸುವ ಕುರಿತು ಹೇಳಿಕೆ ನೀಡಿದ್ದರು. ರಾವತ್ ಹೇಳಿಕೆಗೆ ಇದೀಗ ಮೊದಲ ಬಾರಿ ಬಿಜೆಪಿಯ ನಾಯಕಿಯೊಬ್ಬರು ಬಹಿರಂಗವಾಗಿ ಪ್ರತಿಕ್ರಿಯಿಸಿದರು. ಪವಿತ್ರವಾದ ಹಲವು ವಿಷಯಗಳಿವೆ. ತಾನು ಬಯಸಿದಂತೆ ಜೀವನ ಸಾಗಿಸುವುದು, ತನಗೆ ಸರಿಹೊಂದುವಂತೆ ಸಮಾಜದೊಂದಿಗೆ ತೊಡಗಿಸಿಕೊಳ್ಳಲು ಬಯಸುವ ಮಾರ್ಗವನ್ನು ಆರಿಸಿಕೊಳ್ಳುವುದು ಮಹಿಳೆಯ ಹಕ್ಕು ಎಂದು ಟೈಮ್ಸ್ ನೆಟ್ ವರ್ಕ್ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇರಾನಿ ಹೇಳಿದರು. ಪುರುಷರು, ಮಹಿಳೆಯರು, ರಾಜಕಾರಣಿ ಸಹಿತ ಯಾರೇ ಆಗಲಿ, ಜನರು ಹೇಗೆ ಉಡುಗೆ ಧರಿಸುತ್ತಾರೆ, ಅವರು ಏನು ತಿನ್ನುತ್ತಾರೆ ಎಂದು ಹೇಳುವುದು ಅವರಿಗೆ ಸಂಬಂಧಿಸಿದ ಕೆಲಸವಲ್ಲ. ಏಕೆಂದರೆ ಅಂತಿಮವಾಗಿ ನಮ್ಮ ನೀತಿನಿರೂಪಣೆಯು ಕಾನೂನಿನ ನಿಯಮವನ್ನು ಪಾಲಿಸುತ್ತದೆ ಎಂದರು.