ಹರಿಣಗಳ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ, ಬುಮ್ರಾ ಮಾರಕ ಬೌಲಿಂಗ್

ಕೇಪ್ ಟೌನ್, ಜ.4-ಇಲ್ಲಿನ ನ್ಯೂಲ್ಯಾಂಡ್ ಮೈದಾನದಲ್ಲಿ ಎರಡೇ ದಿನ ಅಂತ್ಯಕಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಎರಡು ಟೆಸ್ಟ್ ಗಳ ಸರಣಿ ಡ್ರಾನಲ್ಲಿ ಅಂತ್ಯಗೊಂತು. ಅಲ್ಲದೆ ರೋಹಿತ್ ಪಡೆ ಸರಣಿ ಸೋಲಿನಿಂದ ಪಾರಾಗಿ ಮೊದಲ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಂಡಿತು.
ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಚೊಚ್ಚಲ ಗೆಲುವು ಸಾಧಿಸಿದ ಭಾರತ, 2011ರ ನಂತರ ಮೊದಲ ಬಾರಿಗೆ ಸರಣಿ ಸೋಲದೆ, ಸಮಬಲಗೊಳಿಸಿತು. ಎರಡು ಪಂದ್ಯಗಳ ಸರಣಿಯು ಉಭಯ ತಂಡಗಳು 1-1 ಅಂತರದಲ್ಲಿ ಡ್ರಾಗೊಳಿಸಿದವು.


ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 79 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡವು 12 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು.
ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 44 ರನ್‌ಗಳ ಜೊತೆಯಾಟ ನಿರ್ಮಿಸಿದರು. ಈ ವೇಳೆ ಆಕ್ರಮಣಕಾರಿಯಾಗಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ 23 ಎಸೆತಗಳಲ್ಲಿ 6 ಬೌಂಡರಿ ಸಮೇತ 28 ರನ್ ಗಳಿಸಿ ಔಟಾದರು.


ನಂತರ ಬಂದ ಶುಭ್ಮನ್ ಗಿಲ್ ಕೂಡ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ 12 ರನ್ ಗಳಿಸಿ ಔಟಾದರು. ಅಂತಿಮವಾಗಿ ರೋಹಿತ್ ಶರ್ಮಾ ಅಜೇಯ 17 ರನ್ ಮತ್ತು ಗೆಲುವಿನ ಬೌಂಡರಿ ಬಾರಿಸಿದ ಶ್ರೇಯಸ್ ಅಯ್ಯರ್ ಅಜೇಯ 4 ರನ್ ಗಳಿಸಿ ಭಾರತ ತಂಡವನ್ನು ಗೆಲ್ಲಿಸಿದರು.
ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ವೇಗಿಗಳಾದ ಕಗಿಸೊ ರಬಾಡ, ನಾಂದ್ರೆ ಬರ್ಗರ್ ಮತ್ತು ಮಾರ್ಕೊ ಜಾನ್ಸೆನ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ದಿನದಾಟದಂತ್ಯಕ್ಕೆ 62 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ, ಎರಡನೇ ದಿನದಂದು ಬ್ಯಾಟಿಂಗ್ ಆರಂಭಿಸಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 176 ರನ್ ಗಳಿಗೆ ಸರ್ವಪತನ ಕಂಡಿತು.
ಮೊದಲ ದಿನ ಮೊಹ್ಮದ್ ಸಿರಾಜ್ ಬೆಂಕಿ ಬೌಲಿಂಗ್ ಪ್ರದರ್ಶಿಸದರೆ ಎರಡನೇ ದಿನ ಜಸ್ಪ್ರೀತ್ ಬುಮ್ರಾ ಕೈಚಳಕ ಮೆರೆದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೆ, ಮತ್ತೊಂದೆಡೆ ಎಡನ್ ಮಾರ್ಕರಂ 106 ಬಾರಿಸಿದ್ದು ವ್ಯರ್ಥವಾಯಿತು. ಉಳಿದ ಆಟಗಾರರು ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಹೆಜ್ಜೆಹಾಕಿದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ ಬಿಗಿ ಬೌಲಿಂಗ್ ದಾಳಿ ನಡೆಸಿದರು. 13.5 ಓವರ್‌ಗಳಲ್ಲಿ 61 ರನ್ ನೀಡಿ 6 ವಿಕೆಟ್ ಕಬಳಿಸಿದರು. ಉಳಿದಂತೆ ಮುಖೇಶ್ ಕುಮಾರ್ 2 ವಿಕೆಟ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಆಗಿತ್ತು. ಈ ವೇಳೆ ಭಾರತದ ಮೊಹಮ್ಮದ್ ಸಿರಾಜ್ 6 ವಿಕೆಟ್ ಪಡೆದು ಮಿಂಚಿದ್ದರು. ನಂತರ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 153 ರನ್ ಗಳಿಸಿ 98 ರನ್‌ಗಳ ಮುನ್ನಡೆ ಸಾಧಿಸಿತ್ತು.