ಹರಿಣಗಳ ಮಡಿಲಿಗೆ ಟೆಸ್ಟ್ ಸರಣಿ: ಭಾರತದ ಕನಸು ಭಗ್ನ

ಕೇಪ್ ಟೌನ್, ಜ.14-ಪ್ರವಾಸಿ ಭಾರತದ ವಿರುದ್ಧ ಇಂದು ಇಲ್ಲಿ ನಡೆದ ‌ಅಂತಿಮ‌ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಏಳು ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿ ಸರಣಿ ಕೈವಶ ಮಾಡಿಕೊಂಡಿದೆ.
ಈ ಬಾರಿಯಾದರೂ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಬೇಕೆಂಬ ಕನಸಿನೊಂದಿಗೆ ಹರಿಣಗಳ ನಾಡಿಗೆ ಪ್ರವಾಸ ಕೈಗೊಂಡಿದ್ದ ಭಾರತ, 2-1 ಅಂತರದಿಂದ ಸೋತು ಮುಖಭಂಗ ಅನುಭವಿಸಿದೆ.
212 ರನ್ ಗಳ ಅಲ್ಪಮೊತ್ತದ ಗುರಿಯನ್ನು ಬೆನ್ನಹತ್ತಿದ ಆತಿಥೇಯ ತಂಡ ಭಾರತದ ಬೌಲಿಂಗ್ ದಾಳಿಗೆ ದಿಟ್ಟ ಉತ್ರರ ನೀಡಿತು.
ಗೆಲುವಿಗೆ 111 ರನ್ ಅಗತ್ಯವಿತ್ತು.‌ ಇಂದು ನಾಲ್ಕನೇ ದಿನದಾಟದಲ್ಲಿ ಮೂರು ವಿಕೆಟ್ ಕಳೆದುಕೊಂಡು‌ 212 ರನ್ ಗಳಿಸಿ ವಿಜಯದ ನಗೆ ಬೀರಿತು.
ಕೀಗನ್ ಪೀಟರ್ ಸನ್ 82 ರನ್ ಬಾರಿಸಿ‌ ತಂಡದ ಗಲುವಿಗೆ ಪ್ರಮುಖ ಪಾತ್ರ ವಹಿಸಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಡುಸೇನ್ 41 ಹಾಗೂ ಬೆವುಮಾ ಅಜೇಯ 32 ರನ್ ಗಳಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡೊಸಿದರು.
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್‌ ಕೀಪರ್ ರಿಷಬ್ ಪಂತ್ ಶತಕ‌ ಬಾರಿಸಿದರಾದರೂ ಬ್ಯಾಟಿಂಗ್ ವೈಫಲ್ಯದ ಜತಗೆ ದಿಟ್ಟ ಬೌಲಿಂಗ್ ಪ್ರದರ್ಶಿಸಲಿಲ್ಲ. ಇದರಿಂದಾಗಿ ಸರಣಿ ಕೈಚೆಲ್ಲುವಂತಾಯಿತು.
ಸೆಂಚುರಿಯನ್​​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 113ರನ್​ಗಳ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಸರಣಿಯಲ್ಲಿ 1–0 ಅಂತರದ ಮುನ್ನಡೆ ಪಡೆದುಕೊಂಡಿದ್ದ ಟೀಂ ಇಂಡಿಯಾ ನಂತರ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಸರಣಿ 1-1 ಅಂತರದಲ್ಲಿ ಸಮಗೊಂಡಿತ್ತು.
ಟೀಂ ಇಂಡಿಯಾ ನೂತನ ಕೋಚ್​ ಆಗಿ ಆಯ್ಕೆಯಾಗಿರುವ ಕನ್ನಡಿಗ ರಾಹುಲ್​ ದ್ರಾವಿಡ್​ಗೂ ಇಂದು ಮೊದಲ ಸೋಲಾಗಿದ್ದು, ಹರಿಣಗಳ ನಾಡಲ್ಲಿ ಭಾರತ ಗೆಲುವು ಸಾಧಿಸುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತುಪಡಿಸಿದೆ.