ಹರಿಜನವಾಡದಲ್ಲಿ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ

ರಾಯಚೂರು,ನ.೧- ನಗರದ ಹರಿಜನವಾಡ ಸಮುದಾಯ ಭವನದ ಆವರಣದಲ್ಲಿ ೬೫ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜಾರೋಹಣ ಕಾರ್ಯಕ್ರಮವು ವಿಜೃಂಭನೆಯಿಂದ ಜರುಗಿತು. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಜನವಾದಿ ಮಹಿಳಾ ಸಂಘಟನೆಯ ಹೆಚ್.ಪದ್ಮಾ ಪೂಜೆ ನೆರವೇರಿಸಿದರು.
ನಂತರ ಮಾತನಾಡಿ ಅವರು ಕನ್ನಡ ಭಾಷೆ, ನೆಲ, ಜಲ, ವಿಷಯದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜೆ.ಎಲ್.ಈರಣ್ಣ ಮಾತನಾಡಿ, ಹಲವಾರು ವರ್ಷಗಳ ಹೋರಾಟ ಮತ್ತು ಪ್ರಾಣತ್ಯಾಗದ ಪರಿಣಾಮ ೧೯೫೬ ರಲ್ಲಿ ಭಾಷಾವಾರು ಪ್ರಾಂತಗಳಾಗಿ ಮೈಸೂರು ರಾಜ್ಯ ಉದಯಿಸಿ, ಮುಂದೆ ೧೯೭೩ ರಲ್ಲಿ ಕರ್ನಾಟಕ ಎಂದು ನಾಮಕರಣಗೊಂಡಿತು. ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷಾ ಬೆಳವಣಿಗೆಗೆ ಅನೇಕ ಮಹನೀಯರ ಮಹತ್ತರವಾದ ಕೊಡುಗೆ ಇರುವುದು ನಾವೆಲ್ಲ ಅರಿತುಕೊಳ್ಳಬೇಕಾದೆ ಎಂದರು.
ಕೆ.ಪಿ.ಅನಿಲ್‌ಕುಮಾರ್ ಮಾತನಾಡಿ ಹರಿಜನವಾಡದ ಜನರ ಭಾಷೆಯು ತೆಲುಗಾದರೂ ಮನಸ್ಸು ಅಪ್ಪಟ ಕನ್ನಡವಾಗಿದೆ. ತೆಲುಗು ವಾತಾವರಣವಿರುವ ಈ ಬಡಾವಣೆಯಲ್ಲಿ ಅದನ್ನು ಬದಲಿಸಿ ಕನ್ನಡ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸಂಘವು ಕಳೆದ ೨೧ ವರ್ಷಗಳಿಂದ ಸತತವಾಗಿ ಕರ್ನಾಟಕ ರಾಜ್ಯೊತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ೧೨೦ ಜನರಿಗೆ ಮಾಸ್ಕ್, ಸ್ಯಾನಿಟೈಸರ್, ಟೂತ್‌ಪೇಸ್ಟ್ ಮತ್ತು ಶಾಂಪೂಗಳನ್ನು ವಿತರಿಸಲಾಯಿತು. ಶಿವಪ್ಪ ಮಣಿಗಿರಿ, ಗೌರವ ಅಧ್ಯಕ್ಷ ಎಸ್.ವೆಂಕಟೇಶ, ಬಿ.ಜೆ.ಪಿ. ಮುಖಂಡ ಆರ್.ಆಂಜಿನೇಯ, ಜನಾರ್ಧನ ಹಳ್ಳಿಬೆಂಚಿ, ಉಪಾಧ್ಯಕ್ಷ ನರಸಿಂಹಲು ಕಾರ್ಪೆಂಟರ್, ಕಾರ್ಯದರ್ಶಿ ಶರಣಪ್ಪ, ಎಸ್.ನಾಗರಾಜ, ಖಜಾಂಚಿ ವೀರೇಶ(ಗಂಗೂಲಿ), ಮಾರುತಿ, ಸಿ.ಎಂ.ಗೋವಿಂದ, ಬಿ.ಜೆ.ಪಿ.ಮುಖಂಡರಾದ ಮೌನೇಶ, ಎಸ್.ರಾಜು, ಶಿವುರೆಡ್ಡಿ, ಸಮರ, ಜಂಬಣ್ಣ, ಪರಿಶಪ್ಪ, ರತನ್‌ಕುಮಾರ, ಉದಯ್‌ಕುಮಾರ್, ಪವನ್‌ಕುಮಾರ್, ನಿತಿನ್, ಸಿ.ಎಂ.ರವಿ, ನವೀನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.