ಹರಳಯ್ಯ ಸಮಾಜದಿಂದ ಸೆ.18ಕ್ಕೆ ಪ್ರತಿಭಾ ಪುರಸ್ಕಾರ

ಕಲಬುರಗಿ,ಸೆ.16: ಶ್ರೀ ಶಿವಶರಣ ಹರಳಯ್ಯ ಸಮಗಾರ (ಮಚಗಾರ) ಸಮಾಜದ ಕಲಬುರಗಿ ಜಿಲ್ಲಾ ಘಟಕದಿಂದ ಇದೇ ಸೆ.18 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ರಾಮ ಮಂದಿರ ಪ್ರದೇಶದ ಮಾನಕರ್ ಲೇಔಟ್‍ನಲ್ಲಿರುವ ಸಮಾಜದ ಭವನದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ.ಯಲ್ಲಿ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಕಾಶಿರಾಯ ನಂದೂರಕರ್ ತಿಳಿಸಿದರು.

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಮಾರಂಭವನ್ನು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ಅವರು ಉದ್ಘಾಟಿಸುವರು. ಶಾಸಕ ಬಸವರಾಜ ಮತ್ತಿಮೂಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಹಾನಗರ ಪಾಲಿಕೆ ಸದಸ್ಯೆ ಅರ್ಚನಾ ಬಸವರಾಜ ಬಿರಾಳ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಮಲ್ಲಿಕಾರ್ಜುನ ಜೇರಟಗಿ, ಬೆಂಗಳೂರು ಡಿ.ಆರ್.ಡಿ.ಓ ಹಿರಿಯ ವಿಜ್ಞಾನಿ ಡಿ.ಜಿ.ರಾವ್ ಅತಿಥಿಗಳಾಗಿ ಪಾಲ್ಗೊಳ್ಳುವರು.

ಕಳೆದ ಎಂಟು ವರ್ಷದಿಂದ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸಲು ಈ ಕಾರ್ಯಕ್ರಮ ನಿರಂತರವಾಗಿ ಆಯೋಜಿಸುತ್ತಾ ಬರಲಾಗಿದೆ. ಈ ವರ್ಷ ಸಹ 2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಹೆಚ್ಚಿನ ಅಂಕ ಪಡೆದ ಕ್ರಮವಾಗಿ 50 ಮತ್ತು 17 ವಿದ್ಯಾರ್ಥಿಗಳಿಗೆ ಗಣ್ಯರಿಂದ ನೆನಪಿನ ಕಾಣಿಕೆ, ನಗದು ಬಹುಮಾನ ನೀಡಿ ಸನ್ಮಾನಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಸಾಧಕರನ್ನು ಸಹ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪದಾಧಿಕಾರಿಗಳಾದ ಶಿವಶರಣಪ್ಪ ಜಿ. ದೊಡ್ಡಮನಿ, ಶಿವರಾಯ ಕಟ್ಟಿಮನಿ, ಸಿದ್ದಣ್ಣ ಭಾವಿಮನಿ, ವೀರಭದ್ರಪ್ಪ ಹೆಬ್ಬಾಳ, ಪುಂಡಲಿಕ್ ಎಸ್. ಟೆಂಗಳಿ, ಕಾಶಿನಾಥ ದಿವಂಟಗಿ ಸೇರಿದಂತೆ ಸಮಾಜದ ಇನ್ನಿತರ ಮುಖಂಡರು ಇದ್ದರು.