ಹರಪನಹಳ್ಳಿ ಸಬ್ ರಿಜಿಸ್ಟರ್ ಕಛೇರಿಗೆ ಶೌಚಾಲಯವೇ ಇಲ್ಲ

ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಸೆ.24: ಪಟ್ಟಣದ ಉಪನೋಂದಾಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಚೇರಿ ಆವರಣದಲ್ಲಿ ಶೌಚಾಲಯವಿಲ್ಲ. ಅವ್ಯವಸ್ಥೆಯ ತಾಣವಾಗಿದ್ದು ಶಾಸಕರು ಸರಿಪಡಿಸಬೇಕು. ಇಲ್ಲದಿದ್ದರೆ ಸುಸಜ್ಜಿತ ಸ್ಥಳಕ್ಕೆ ಕಚೇರಿಯನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಯುವ ಮುಖಂಡ ಎಂ.ಬಿ. ಯಶವಂತಗೌಡ ಒತ್ತಾಯಿಸಿದ್ದಾರೆ.
ನಿತ್ಯವೂ ಸಾವಿರಾರು ಜನರು ವಿವಿಧ ಕೆಲಸಗಳಿಗಾಗಿ ಕಚೇರಿಗೆ ಬರುತ್ತಾರೆ. ಆದರೆ ಶೌಚಾಲಯವೇ ಇಲ್ಲ. ಸುತ್ತಮುತ್ತ ಎಲ್ಲಿಯೂ ಸೌಲಭ್ಯ ಇಲ್ಲದಿರುವುದರಿಂದ ಜನರು ಪರದಾಡುವಂತಾಗಿದೆ. ಮಹಿಳೆಯರ ಸ್ಥಿತಿ ಹೇಳತೀರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಸರ್ಕಾರಕ್ಕೆ ಬರುವ ಆದಾಯವನ್ನಷ್ಟೇ ನಿರೀಕ್ಷಿಸದೆ ಕಚೇರಿಯನ್ನು ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ತಾಲ್ಲೂಕಿನಲ್ಲಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ, ಪಕ್ಷಭೇದ ಮಾಡಬಾರದು ಎಂದು ಆಗ್ರಹಿಸಿದರು.
ತಾಲ್ಲೂಕಿನಲ್ಲಿ ಈರುಳ್ಳಿ, ಶೇಂಗಾ, ಸೇವಂತಿ ಬೆಳೆ ಹೆಚ್ಚು ಹಾನಿಗೀಡಾಗಿದೆ. ಹಾನಿಯಾದ ಪ್ರದೇಶದ ಸಮೀಕ್ಷೆ ನಡೆಸಿ ಕೂಡಲೇ ಪರಿಹಾರದ ಕ್ರಮಗಳನ್ನು ಜರುಗಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.