ಹರಪನಹಳ್ಳಿ ಪುರಸಭೆ ಬಿಜೆಪಿ ತೆಕ್ಕೆಗೆ

ಹರಪನಹಳ್ಳಿ ನ 08 : ಸ್ಥಳೀಯ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚು ಸದಸ್ಯ ಸ್ಥಾನ ಹೊಂದಿದ್ದರೂ ಸಹ ಅದಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ಹಿಂದುಳಿದ ವರ್ಗ(ಅ) ವರ್ಗಕ್ಕೆ ಮೀಸಲಾಗಿರುವ ಪುರಸಭೆ ಅಧ್ಯಕ್ಷ ಸ್ಥಾನ ಬಯಸಿ ಬಿಜೆಪಿಯಿಂದ ಇಂಜತ್ಕರ್ ಮಂಜುನಾಥ್, ಕಾಂಗ್ರೆಸ್‍ನಿಂದ ಜೋಗಿನ ಭರತೇಶ್ ಹಾಗೂ ಪಕ್ಷೇತರ ಸದಸ್ಯ ಡಿ.ಅಬ್ದುಲ್‍ರಹಿಮಾನಸಾಬ್ ನಾಮಪತ್ರ ಸಲ್ಲಿಸಿದ್ದರು. ಪರಿಶಿಷ್ಠ ಪಂಗಡ(ಮಹಿಳೆ)ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನ ಬಯಸಿ ಬಿಜೆಪಿಯಿಂದ ಭೀಮವ್ವ ಸಣ್ಣಹಾಲಪ್ಪ, ಕಾಂಗ್ರೆಸ್‍ನಿಂದ ತಳವಾರ ಲಕ್ಷ್ಮವ್ವ ನಾಮಪತ್ರ ಸಲ್ಲಿಸಿದ್ದರು. ಕೊನೆಯ ಹಂತದವರೆಗೂ ಯಾರು ನಾಮಪತ್ರ ಹಿಂಪಡೆಯದೇ ಎಲ್ಲರೂ ಕಣದಲ್ಲಿದ್ದರು.
ಒಟ್ಟು 27 ಜನ ಸದಸ್ಯರ ಪೈಕಿ 15 ಜನರ ಬೆಂಬಲ ಬೇಕಿತ್ತು. ಆದರೆ ಕಾಂಗ್ರೆಸ್ ಪಕ್ಷದ 6 ಜನ ಮತ್ತು ಇಬ್ಬರು ಪಕ್ಷೇತರೆರು, ಓರ್ವ ಜೆಡಿಎಸ್ ಸದಸ್ಯೆ ಸೇರಿ ಒಟ್ಟು 9 ಜನ ಸದಸ್ಯರು ಗೈರುಹಾಜರಾಗಿದ್ದರು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಜೋಗಿನ ಭರತೇಶ್-8 ಹಾಗೂ ಇಂಜತ್ಕರ್ ಮಂಜುನಾಥ್-12 ಮತಗಳು, ಉಪಾಧ್ಯಕ್ಷ ಸ್ಥಾನದ ತಳವಾರ ಲಕ್ಷ್ಮವ್ವ-8, ಭೀಮವ್ವ ಸಣ್ಣಹಾಲಪ್ಪ-12 ಮತಗಳನ್ನು ಪಡೆದುಕೊಂಡರು. ಹೆಚ್ಚು ಮತಗಳನ್ನು ಪಡೆದುಕೊಂಡ ಇಂಜತ್ಕರ್ ಮಂಜುನಾಥ ಅಧ್ಯಕ್ಷ ಹಾಗೂ ಭೀಮವ್ವ ಸಣ್ಣಹಾಲಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾದಿಕಾರಿ ತಹಶೀಲ್ದಾರ್ ಅನಿಲ್‍ಕುಮಾರ್ ಘೋಷಿಸಿದರು. ಘೋಷಣೆ ಆಗುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಕ್ಷೇತರ ಸದಸ್ಯ ಡಿ.ಅಬ್ದುಲ್‍ರಹಿಮಾನ್‍ಸಾಬ್ ಅವರು ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದ ಪರಿಣಾಮ ಅಭ್ಯರ್ಥಿ ಸೊನ್ನೆ ಮತಗಳನ್ನು ಪಡೆದುಕೊಂಡರು. ಕಾಂಗ್ರೆಸ್ ಸದಸ್ಯರಾದ ಎಂ.ವಿ.ಅಂಜಿನಪ್ಪ, ಗೊಂಗಡಿ ನಾಗರಾಜ್, ಟಿ.ವೆಂಕಟೇಶ್, ಗಣೇಶ್, ಸತ್ತೂರು ಯಲ್ಲಮ್ಮ, ಹರಿಜನ ಕೊಟ್ರೇಶ್ ಹಾಗೂ ಪಕ್ಷೇತರ ಸದಸ್ಯರಾದ ಡಿ.ಅಬ್ದುಲ್‍ರಹಿಮಾನಸಾಬ್, ಹನುಮಕ್ಕ, ಜೆಡಿಎಸ್ ಸದಸ್ಯೆ ಶಹನಾಬಿ ಅವರು ಚುನಾವಣೆ ಪ್ರಕ್ರಿಯೆ ಸಮಯ ಮಧ್ಯಾಹ್ನ 1 ಗಂಟೆ ನಂತರ ಸಭಾಂಗಣದೊಳಗೆ ಪ್ರವೇಶಿಸಲು ಆಗಮಿಸಿದಾಗ ಚುನಾವಣಾದಿಕಾರಿ ಅವಕಾಶ ಕಲ್ಪಿಸಲಿಲ್ಲ. ಹೀಗಾಗಿ 9 ಜನ ಸದಸ್ಯರು ಚುನಾವಣೆ ಪ್ರಕ್ರಿಯೆಯಿಂದ ಹೊರಗೆ ಉಳಿಯುವಂತಾಯಿತು.
ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಶಾಸಕ ಜಿ.ಕರುಣಾಕರರೆಡ್ಡಿ ಅವರು ಭಾಗವಹಿಸಿ ಬಿಜೆಪಿ ಅಭ್ಯರ್ಥಿ ಪರ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ಹೀಗಾಗಿ ಬಿಜೆಪಿ ಸಂಖ್ಯಾಬಲ 10ರಿಂದ 12ಕ್ಕೆ ಏರಿಕೆಯಾಗಿ ಬಹುಮತ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಕೈ ಪಕ್ಷದೊಳಗಿನ ಭಿನ್ನಮತದಿಂದ ಒಟ್ಟು 6 ಜನ ಕೈ ಕೊಟ್ಟಿದ್ದರಿಂದ 14 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷ ಅದಿಕಾರದಿಂದ ವಂಚಿತವಾಯಿತು.

ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರು ಪುರಸಭೆ ಚುನಾವಣೆಯ ಉಸ್ತುವಾರಿವಹಿಸಿಕೊಂಡು 14 ಸ್ಥಾನಗಳನ್ನು ಗೆಲ್ಲಿಸಿಕೊಂಡು ಬಂದಿದ್ದರು. ಆದರೆ ಟಿಕೆಟ್ ಹಂಚಿಕೆ ಗೊಂದಲದಿಂದ ಇವರ ನಾಯಕತ್ವಕ್ಕೆ ಸೆಡ್ಡು ಹೊಡೆದು ಪಕ್ಷೇತರರಾಗಿ ಜಯ ಗಳಿಸಿದ ಇಬ್ಬರು ಸದಸ್ಯರು ಸೇರಿದಂತೆ ಒಟ್ಟು 8 ಜನ ಸದಸ್ಯರು ಚುನಾವಣೆಯಲ್ಲಿ ಕೈ ಕೊಡುವ ಮೂಲಕ ಪಿ.ಟಿ.ಪರಮೇಶ್ವರನಾಯ್ಕ ಬಣಕ್ಕೆ ಮುಖಭಂಗವಾಗುವಂತೆ ಮಾಡಿದ್ದಾರೆ. ಪುರಸಭೆ ಚುನಾವಣೆ ಉಸ್ತುವಾರಿ ನೇಮಕವಾಗಿದ್ದ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಸಿರಾಜ್‍ಶೇಖರ್ ಅವರು ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದರೂ ಏನೂ ಉಪಯೋಗವಾಗಲಿಲ್ಲ.