ಹರಪನಹಳ್ಳಿ ಪಟ್ಟಣದಲ್ಲಿ ಹೋಳಿ ಸಂಭ್ರಮ

 ಹರಪನಹಳ್ಳಿ.ಮಾ.೩೦; ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಎಲ್ಲಿ ನೋಡಿದರೂ ಬಣ್ಣ ಎರಚುವ ಪೋರ ಹಾಗೂ ಕಿಶೋರಿಯರು, ಜಾತಿ-ಮತದ ಹಂಗಿಲ್ಲದೇ ಸ್ನೇಹಿತರೊಂದಿಗೆ ಸಂತಸ ಹಂಚಿಕೊಳ್ಳುತ್ತಾ ಜನತೆ ಬಣ್ಣದಲ್ಲಿ ಮಿಂದೆದ್ದರು. ಕೊರೊನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ಹೋಳಿ ಹಬ್ಬ ಸ್ವಲ್ಪಮಟ್ಟಿಗೆ ಕಳೆಗುಂದಿತ್ತು. ಪ್ರತಿ ವರ್ಷ ಪಟ್ಟಣದ ತಾಯವ್ವನ ಹುಣಸೇಮರದ ಹತ್ತಿರ ಸಂಸ್ಕಾರ ಭಾರತಿ ಹಾಗೂ ಸಹೃದಯಿ ನಾಗರೀಕರ ಬಳಗದವತಿಯಿಂದ ಯುವಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಕುಳಿ ತುಂಬಿದ ಮಡಿಕೆ ಒಡೆಯುವ ಆಟ ಆಯೋಜಿಸುತ್ತಿದ್ದರು. ಆದರೆ ಕಳೆದ ವರ್ಷದಿಂದ ಆಟ ಆಯೋಜನೆ ಮಾಡುವುದನ್ನು ನಿಲ್ಲಿಸಲಾಗಿದೆ. ತಮ್ಮ ತಮ್ಮ ಮನೆಗಳ ಬಳಿ ಹಾಗೂ ಯುವಕರು ಗುಂಪು ಕಟ್ಟಿಕೊಂಡು ಅಲ್ಲಲ್ಲಿ ಬಣ್ಣ ಎರಚುತ್ತಿದ್ದು ಕಂಡು ಬಂತು. ಪಟ್ಟಣದ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಪ್ರವಾಸಿ ಮಂದಿರ ವೃತ್ತ, ಜೋಯಿಷರಕೇರಿ ಸೇರಿದಂತೆ ಯುವಕರು ಗುಂಪು ಕಟ್ಟಿಕೊಂಡು ಬಣ್ಣ ಎರಚಿ ಸಂಭ್ರಮಿಸಿದರು.