ಹರಪನಹಳ್ಳಿ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಕೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಏ.20 : ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಹಿರಿಯ ಪುತ್ರಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಸಾವಿರಾರು ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಕೋಟೆ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಆರಂಭವಾದ ಮೆರವಣಿಗೆ ಇಜಾರಿ ಶಿರಸಪ್ಪ ವೃತ್ತ, ಹಳೆ ಬಸ್ ನಿಲ್ದಾಣ, ಪ್ರವಾಸಿ ಮಂದಿರ ವೃತ್ತದ ಮೂಲಕ ತಾಲ್ಲೂಕು ಆಡಳಿತ ಸೌಧ ತಲುಪಿತು. ಈ ವೇಳೆ ಜನದಟ್ಟಣೆ ಹೆಚ್ಚಾಗಿದ್ದರಿಂದ ಅಭ್ಯರ್ಥಿ ಎಂ.ಪಿ.ಲತಾ ಮತ್ತು ಅವರ ಜೊತೆಗೆ 10 ಜನ ಸೂಚಕರನ್ನು ಒಳಗಡೆ ಕಳಿಸಿಕೊಟ್ಟರು, ಅವರನ್ನೆ ಹಿಂಬಾಲಿಸಿದ ಬೆಂಬಲಿಗರು ಗೇಟಿನೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ, ಜನರನ್ನು ನಿಯಂತ್ರಿಸಿದರು.
ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಸಹೋದರ ಎಂ.ಪಿ.ರವೀಂದ್ರ ಅಗಲಿಕೆ ನಂತರ ಮಹಿಳೆಯಾಗಿ ಕ್ಷೇತ್ರದಲ್ಲಿ ತಿರುಗಾಡಿ ಕಾಂಗ್ರೆಸ್ ಪಕ್ಷ ಸಂಘಟಿಸಿದ್ದೆ. ಆದರೆ ಹೈಕಮಾಂಡ್ ನನಗೆ ಟಿಕೆಟ್ ಕೊಡದೇ ನನ್ನ ಸ್ವಾಭಿಮಾನಕ್ಕೆ ದಕ್ಕೆ ಉಂಟು ಮಾಡಿದೆ. ಇದರ ಪರಿಣಾಮ ಚುನಾವಣೆ ಬಳಿಕ ಗೊತ್ತಾಗಲಿದೆ ಎಂದರು.
ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರಿಗೆ ಟಿಕೆಟ್ ಕೇಳಲಾಗಿತ್ತು, ಆದರೆ ಹೈಕಮಾಂಡ್ ಮಹಿಳೆಯರ ಕೂಗಿಗೆ ಬೆಲೆ ಕೊಡಲಿಲ್ಲ. ಹಾಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಜನಾಭಿಪ್ರಾಯ ನಿರೂಪಿಸುವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಎಲ್. ಹನುಮಂತಪ್ಪ, ಮುಖಂಡ ಬಿ.ಕೆ.ಪ್ರಕಾಶ, ದೊಡ್ಡಜ್ವರ ಹನುಮಂತಪ್ಪ, ಎಚ್.ಎಂ. ಮಲ್ಲಿಕಾರ್ಜುನ, ಪುರಸಭಾ ಸದಸ್ಯರಾದ ಎಂ.ವಿ. ಅಂಜಿನಪ್ಪ, ಗೊಂಗಡಿ ನಾಗರಾಜ, ಉದ್ದಾರ ಗಣೇಶ, ವಕೀಲ ವೆಂಕಟೇಶ ಲಾಟಿ, ದಾದಾಪೀರ್, ಚಂದ್ರೇಗೌಡ, ವಸಂತಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ವನಜಾಕ್ಷಮ್ಮ, ರತ್ನಮ್ಮ, ನಂದಿಬೇವೂರು ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಶೇಖರ್, ಕನಕನ ಬಸ್ಸಾಪುರ ಮಂಜುನಾಥ, ಎಲ್. ಮಂಜನಾಯ್ಕ, ಅಗ್ರಹಾರ ಅಶೋಕ, ಕೆ.ಎಂ. ಬಸವರಾಜಯ್ಯ, ನೇತ್ರಾವತಿ, ಚಿಗಟೇರಿ ನೀಲಪ್ಪ, ಮಾಡ್ಲಗೇರಿ ಅಶೋಕ, ನಿಲುವಂಜಿ ಅಶೋಕ, ಡಿ.ರೆಹಮಾನ್, ಕೆ.ಉದಯಶಂಕರ್, ಚಿಗಟೇರಿ ಮಂಜುನಾಥ್, ಗೌತಮ್ ಪ್ರಭು, ನವರಂಗ, ತಿಮ್ಮಣ್ಣ, ಮತ್ತೂರು ಬಸವರಾಜ, ಉದಯ ಶಂಕರ್ ಇತರರಿದ್ದರು.