ಹರಪನಹಳ್ಳಿ ತಾಲ್ಲೂಕಿನ ವಿವಿಧ ನರೇಗಾ ಕಾಮಗಾರಿ ವೀಕ್ಷಣೆ ಮಾಡಿದ ನರೇಗಾ ಆಯುಕ್ತರು

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಏ.೨೦:  ತಾಲೂಕಿನಲ್ಲಿ‌ ನರೇಗಾದಡಿ ಕೈಗೆತ್ತಿಕೊಂಡ ಶಾಲಾ ಕಾಮಗಾರಿಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾದ ಪವನ್ ಕುಮಾರ್ ಮಾಲಪಾಟಿ ಹೇಳಿದರು.ತಾಲೂಕಿನ ಬೆಣ್ಣಿಹಳ್ಳಿ ಹಾಗೂ ಮೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನರೇಗಾದಡಿ ಆಭಿವೃದ್ಧಿಪಡಿಸಿದ ಕಾಮಗಾರಿಗಳ ಸ್ಥಳಕ್ಕೆ ಶುಕ್ರವಾರ ಭೇಟಿ‌ ನೀಡಿ ಪರಿಶೀಲಿಸಿ ಮಾತನಾಡಿದರು.ಶಾಲಾ ಶೌಚಾಲಯ ಕಾಮಗಾರಿಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ. ಅಡುಗೆ ಕೋಣೆ, ಕಾಂಪೌಂಡ್ ಸೇರಿದಂತೆ ಇತರ ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆ. ಆದರೆ, ಕಾಮಗಾರಿಗಳ ಕಡತಗಳನ್ನು ಸಹ ಅದೇ ರೀತಿ ಉತ್ತಮವಾಗಿ ನಿರ್ವಹಿಸಿರಬೇಕು ಎಂದು ‌ತಾಂತ್ರಿಕ ಸಹಾಯಕರಿಗೆ ಸೂಚನೆ ನೀಡಿದರು.ಬೆಣ್ಣಿಹಳ್ಳಿ ತಾಲೂಕಿನ ನಿಲುವಂಜಿ ಗ್ರಾಮದ ಶ್ರೀಮತಿ ರುದ್ರಾಂಬ ಎಂ.ಪಿ.ಪ್ರಕಾಶ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್‌ ಶೌಚಾಲಯ ಹಾಗೂ ಕಾಂಪೌಂಡ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ‌ ನೀಡಿದ ಆಯುಕ್ತರು, ಇನ್ನೂ ಇದೇ ಶಾಲೆಯಲ್ಲಿ ಬೇರೆ ಬೇರೆ ಕಾಮಗಾರಿ ತೆಗೆದುಕೊಳ್ಳಿ, ಶಾಲಾ ಮೈದಾನ ಅಭಿವೃದ್ಧಿ, ಪೌಷ್ಟಿಕ ಕೈತೋಟ, ವಿವಿಧ ಕ್ರೀಡೆಯ ಅಂಕಣಗಳ ಅಭಿವೃದ್ಧಿಪಡಿಸಬಹುದು. ಆದರೆ, ಮೈದಾನ ಅಭಿವೃದ್ಧಿ ವೇಳೆ ಗಿಡಗಳನ್ನು ಕಡಿಯದಂತೆ ಎಚ್ಚರವಹಿಸಿ ಎಂದು ತಿಳಿಸಿದರು.ಮೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈದೂರು ಗ್ರಾಮದ ಗುರುಲಿಂಗನಗೌಡ ಎಂಬುವವರು ಅಭಿವೃದ್ದಿಪಡಿಸಿಕೊಂಡ ದಾಳಿಂಬೆ ತೋಟ, ಕೆಂಚಮ್ಮ ಎಂಬುವವರು ಅಭಿವೃದ್ಧಿಪಡಿಸಿದ ಪಪ್ಪಾಯ ತೋಟವನ್ನು ವೀಕ್ಷಣೆ ಮಾಡಿದ ಆಯುಕ್ತರು, ನರೇಗಾದಡಿ ವೈಯುಕ್ತಿಕ ಯೋಜನೆಯಡಿ‌ ತೋಟಗಾರಿಕೆ ಸೇರಿದಂತೆ ಇತರೆ ಕಾಮಗಾರಿಗಳಲ್ಲಿ ಫಲಾನುಭವಿಗಳು ಸಹ ನರೇಗಾದಡಿ‌ ಅಕುಶಲ ಕೂಲಿ ಕೆಲಸ ಮಾಡಬೇಕು. ಇದರಿಂದ ಮಾನವ ದಿನಗಳ ಹೆಚ್ಚೆಚ್ಚು ಸೃಜನೆಯಾಗುತ್ತವೆ. ಇದರ ಜತೆಗೆ ಮತ್ತಷ್ಟು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನೆರವಾಗುತ್ತದೆ ಎಂದು ಸಲಹೆ ನೀಡಿದರು.ಮೈದೂರು ಗ್ರಾಪಂ ವ್ಯಾಪ್ತಿಯ ಬಳಿಗನೂರು ಸಹಿಪ್ರಾ ಶಾಲೆಯಲ್ಲಿ ಶಾಲಾ ಅಡುಗೆ ಕೋಣೆ ಹಾಗೂ ಭೋಜನಾಲಯ, ಕೆಸರಹಳ್ಳಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ನರೇಗಾದಡಿ ನಿರ್ಮಿಸಿ ಶೌಚಾಲಯ, ಕಾಂಪೌಂಡ್ ವೀಕ್ಷಣೆ ಮಾಡಿ ಸ್ಥಳದಲ್ಲೇ ಕಾಮಗಾರಿ ಕಡತ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಸದಾಶಿವ ಪ್ರಭು, ಉಪ ಕಾರ್ಯದರ್ಶಿಗಳಾದ ಭೀಮಪ್ಪ ಲಾಳಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಜಂಟಿ ನಿರ್ದೇಶಕ(ತಾಂತ್ರಿಕ)ರಾದ ವೇಣುಗೋಪಾಲ್ ರಾವ್, ರಾಜ್ಯ ನರೇಗಾ ಸಹಾಯಕ ನಿರ್ದೇಶಕ ಸಂಜೀವಕುಮಾರ್, ಯೋಜನಾ ಅಭಿಯಂತರರಾದ ಅಭಿರಾಮ್, ಜಿಐಎಸ್ ಸಂಯೋಜಕ ಆದರ್ಶ್, ಹರಪನಹಳ್ಳಿ ತಾಲೂಕು ಪಂಚಾಯಿತಿಯ  ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ವೈ.ಎಚ್, ಸಹಾಯಕ ನಿರ್ದೇಶಕ(ಗ್ರಾ.ಉ.)ರಾದ ಸೋಮಶೇಖರ್ ಯು.ಎಚ್., ಎಡಿಪಿಸಿ ಬಸವರಾಜ್, ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ತಾಂತ್ರಿಕ ಸಹಾಯಕರಾದ ಲೋಕೇಶ್ ನಾಯ್ಕ, ರವಿ ಹಲಗೇರಿ ಅನುಷ್ಠಾನ ಇಲಾಖೆ ಅಧಿಕಾರಿಗಳು, ತಾಪಂ, ಗ್ರಾಪಂ ಸಿಬ್ಬಂದಿ ಇದ್ದರು.