ಹರಪನಹಳ್ಳಿ ಜಿಲ್ಲೆಗಾಗಿ ಹೋರಾಟಕ್ಕೆ ಸಿದ್ಧ: ಕರುಣಾಕರ ರೆಡ್ಡಿ


ಹರಪನಹಳ್ಳಿ.ನ.೨೦; ತಾಲ್ಲೂಕನ್ನು ಜಿಲ್ಲಾ ಕೇಂದ್ರವಾಗಿ ರಚಿಸಲು ನಿರಂತರವಾಗಿ ಹೋರಾಟ ನಡೆಸಲು ಸಿದ್ಧ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು. ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಗುರುವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪಶ್ಚಿಮ ಕೆಲ ತಾಲ್ಲೂಕುಗಳ ಸಾರ್ವಜನಿಕರ ಹಿತ ಕಾಯುವುದಕ್ಕಾಗಿ ಹರಪನಹಳ್ಳಿ ಜಿಲ್ಲಾ ಕೇಂದ್ರಕ್ಕಾಗಿ ನಿರಂತರ ಹೋರಾಟ ಮಾಡುತ್ತ ಬಂದಿ
ದ್ದೇವೆ. ಈ ಕುರಿತು ಪ್ರಗತಿಪರರೊಂದಿಗೆ ಸಿಎಂ ಬಳಿ ನಿಯೋಗ ಕೂಡ ಹೋಗಿದ್ದೆವು. ಈ ಕುರಿತು ತಾಲ್ಲೂಕನ್ನು ಜಿಲ್ಲೆಯನ್ನಾಗಿ ಸೇರ್ಪಡೆ ಮಾಡುವಂತೆ ಪುನಃ ಸಿಎಂಗೆ ಪತ್ರ ಬರೆಯುತ್ತೇನೆ ಹರಪನಹಳ್ಳಿ ಜಿಲ್ಲಾ ಹೋರಾಟ ಸಮಿತಿಯೊಂದಿಗೆ ಸಹಕಾರ ನೀಡುತ್ತ ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ ಮಾಡುತ್ತೇನೆ ಎಂದರು. ಡಿಎಂಎಫ್ ಯೋಜನೆ ಅಡಿಯಲ್ಲಿ ೮.೮೦ ಕೋಟಿ ವೆಚ್ಚದಲ್ಲಿ ಶ್ರೀಕಂಠಪುರ- ಹಿರೇಮೆಗಳಗೆರೆ ಚಿಕ್ಕಮೇಗಳಗೆರೆ-ಒಡ್ಡಿನಹಳ್ಳಿ ಕ್ರಾಸ್‌ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಪಂಚಾಯಿತಿ ಸದಸ್ಯೆ ರಶ್ಮಿ ರಾಜಪ್ಪ, ಎಇಇ ಜಯಪ್ಪ, ಸಹಾಯಕ ಎಂಜಿನಿಯರ್ ಮಹೇಶ್ ನಾಯ್ಕ, ಮುಖಂಡರಾದ ಹೊನ್ನಪ್ಪ, ರವಿ, ಹನುಮಂತಪ್ಪ, ಅನಂದಪ್ಪ, ಪರಶುರಾಮಪ್ಪ, ರಾಜಪ್ಪ, ಮಂಜಪ್ಪ, ಇದ್ದರು.
ಶಾಸಕರ ಕಾರನ್ನು ಅಡ್ಡಗಟ್ಟಿದ ಗ್ರಾಮಸ್ಥರು: ನಾಗತಿಕಟ್ಟೆ ತಾಂಡಾದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದಿದ್ದ ಶಾಸಕ ಜಿ. ಕರುಣಾಕರ ರೆಡ್ಡಿ ಮಾತು ತಪ್ಪಿದ್ದಾರೆ? ಎಂದು ಆರೋಪಿಸಿ ತಾಂಡಾದ ಗ್ರಾಮಸ್ಥರು ಶಾಸಕರ ಕಾರನ್ನು ಅಡ್ಡಗಟ್ಟಿದರು. ಇದರಿಂದ ಪೊಲೀಸರ ಹಾಗೂ ಗ್ರಾಮಸ್ಥರ ನಡುವೆ ಕ್ಷಣಕಾಲ ಮಾತಿನ ಚಕಮಕಿ ನಡೆಯಿತು.ಇದುವರೆಗೂ ರಸ್ತೆಗೆ ಮಣ್ಣು ಹಾಕುವ ಗೋಜಿಗೂ ಶಾಸಕರು ಹೋಗಿಲ್ಲ? ಎಂದು ದೂರಿದರು. ಮಧ್ಯ ಪ್ರವೇಶಿಸಿದ ಸಿಪಿಐ ಕೆ.ಕುಮಾರ್ ನೇತೃತ್ವದ ತಂಡ ಗ್ರಾಮಸ್ಥರನ್ನು ನಿಯಂತ್ರಿಸಿ ಪರಿಸ್ಥಿತಿ ತಿಳಿಗೊಳಿಸಿತು. ಗ್ರಾಮಸ್ಥರಾದ ಭೀಮ ನಾಯ್ಕ, ಕೃಷ್ಣ ನಾಯ್ಕ, ಕುಮಾರ ನಾಯ್ಕ, ಶೆಟ್ಟಿ ನಾಯ್ಕ, ವೆಂಕಟೇಶ್ ನಾಯ್ಕ, ಸಂತೋಷ, ಮಂಜುನಾಥ್ ಇದ್ದರು.
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ;ರಾಜ್ಯ ಸಚಿವ ಸಂಪುಟ ಪುನರ್ ರಚನೆಯಲ್ಲಿ ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ೨೬ ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಅಲ್ಲದೆ, ಹಿಂದೆ ಸಚಿವನಾಗಿ ಕೆಲಸ ಮಾಡಿರುವ ಅನುಭವದೊಂದಿಗೆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಬದ್ಧ. ಜಿಲ್ಲಾ ಪುನರ್ವಿಂಗಡಣೆ, ಸಚಿವ ಸ್ಥಾನಕ್ಕಾಗಿ ರಾಜೀನಾಮೆ ತಂತ್ರ ಯೋಗ್ಯವಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧ? ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.