ಹರಪನಹಳ್ಳಿ ಜಿಲ್ಲೆಗಾಗಿ ಅಮರಣಾಂತರ ಉಪವಾಸ ಧರಣಿ

ಹರಪನಹಳ್ಳಿ ನ 20 : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ನೇತೃತ್ವದಲ್ಲಿ ಹರಪನಹಳ್ಳಿ ಜಿಲ್ಲಾ ಹೋರಾಟ ಸಮಿತಿ ಪದಾಧಿಕಾರಿಗಳು ಸಭೆ ನಡೆಸಿ ಹರಪನಹಳ್ಳಿ ಜಿಲ್ಲೆ ಘೋಷಣೆಯಾಗುವವರೆಗೂ ಅಮರಣಾಂತರ ಉಪವಾಸ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ವೃತ್ತದ ಹೋರಾಟ ಸಮಿತಿಯ ಟೆಂಟ್‍ನಲ್ಲಿ ನ.21ರಂದು ಬೆಳಿಗ್ಗೆ 12 ಗಂಟೆಯಿಂದ ಮೌಲ್ವಿ ಖಾಜಿ ಮುಸ್ತಾಖ್‍ಅಹ್ಮದ್ ಅವರು ಅನಿರ್ಧಿಷ್ಟಾವಧಿ ಅಮರಣಾಂತರ ಉಪವಾಸ ಧರಣಿ ಸತ್ಯಾಗ್ರಹ ಕೂಡಲಿದ್ದಾರೆ. ಜೊತೆಗೆ ವಿವಿಧ ಪ್ರಗತಿಪರ ಸಂಘಟನೆಗಳು ಕೂಡ ಕೈ ಜೋಡಿಸಲಿವೆ. ಶಾಂತಿಯುತ ಹೋರಾಟದ ಹಂತಗಳು ಮುಗಿದಿದ್ದು,
ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡಿಸುವುದು, ರಸ್ತೆ ತಡೆ ಸೇರಿದಂತೆ ಉಗ್ರ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
ಜಿಲ್ಲಾ ಹೋರಾಟ ಸಮಿತಿಯ ಮುಖಂಡ ಇದ್ಲಿ ರಾಮಪ್ಪ ಮಾತನಾಡಿ, ಹರಪನಹಳ್ಳಿ ಜಿಲ್ಲೆ ಘೋಷಣೆ ವಿಷಯದಲ್ಲಿ ಶಾಸಕ ಕುರುಣಾಕರರೆಡ್ಡಿ ವಿಫಲವಾಗಿದ್ದಾರೆ. ಮುಖ್ಯಮಂತ್ರಿಗಳ ಬಳಿ ನಿಯೋಗ ನಂತರ ಏನಾಗಿದೆ ಎಂಬುವುದನ್ನು ಶಾಸಕರು ತಿಳಿದುಕೊಂಡಿಲ್ಲ. ಕ್ಷೇತ್ರದಲ್ಲಿ ಅವಕಾಶವಾದಿತನ ರಾಜಕಾರಣ ಮಾಡುತ್ತಿದ್ದು, ತಾಲ್ಲೂಕಿಗೆ ಈ ಹಿಂದೆ ಹೈ.ಕ ಸೌಲಭ್ಯ ಕೈ ತಪ್ಪಲು ಮತ್ತು ಇದೀಗ ಜಿಲ್ಲಾ ಕೇಂದ್ರ ಘೋಷಣೆ ಆಗದಿರುವುದಕ್ಕೆ ನೇರವಾಗಿ ಕರುಣಾಕರರೆಡ್ಡಿಯೇ ಕಾರಣವಾಗಿದ್ದಾರೆ. ಶಾಸಕರ ಮೊಸಳೆ ಕಣ್ಣೀರು ಬೇಕಿಲ್ಲ, ತಾಲ್ಲೂಕಿನ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ರಾಜೀನಾಮೆ ಬಿಸಾಕಿ ಹೋರಾಟ ಬರಲಿ. ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ತಮ್ಮ ರಾಜಕೀಯಕ್ಕಾಗಿ ಹರಪನಹಳ್ಳಿಗೆ 371ಜೆ ಕಲಂ ಸೌಲಭ್ಯ ಕೊಡಲು ಮೊದಲು ವಿರೊಧಿಸಿದ್ದರು. ನಂತರ ನಾನೇ ಮಾಡಿಸಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇಲ್ಲಿ ರಾಜಕಾರಣ ಮಾಡಲು ಅವಕಾಶ ಬೇಕು ಎನ್ನುವವರು ಇಲ್ಲಿಯ ಜನರ ಧ್ವನಿಯಾಗಿ ಕೆಲಸ ಮಾಡಬೇಕು. ವಿಧಾನಸೌಧದಲ್ಲಿ ಧ್ವನಿ ಮೊಳಗಿಸಬೇಕು ಎಂದು ಆಗ್ರಹಿಸಿದರು.
ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ರಮೇಶನಾಯ್ಕ, ಚಂದ್ರನಾಯ್ಕ ಮಾತನಾಡಿ, ಶಾಸಕ ಕರುಣಾಕರರೆಡ್ಡಿ ಕೇವಲ ಪತ್ರಿಕೆ ಹೇಳಿಕೆಗಳಿಗೆ ಸೀಮಿತವಾಗಿದ್ದಾರೆ. ಜಿಲ್ಲಾ ಕೇಂದ್ರ ಮಾಡಬೇಕು ಇಲ್ಲವೇ ರಾಜೀನಾಮೆ ನೀಡಬೇಕು. ಮುಂದಿನ ದಿನಗಳಲ್ಲಿ ಕಚೇರಿಗೆ ಮುತ್ತಿಗೆ ಹಾಕುವುದರ ಜೊತೆಗೆ ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಡುವುದಿಲ್ಲ ಎಂದ ಅವರು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ನಾಚೀಕೆಯಾಗಬೇಕು. ಅಧಿಕಾರ ಹಿಡಿಯಲು ಅವಣಿಸುವ ಅವರು ಜಿಲ್ಲೆ ಹೋರಾಟಕ್ಕೆ ಬರಬೇಕು ಎಂದು ತಾಕೀತು ಮಾಡಿದರು.
ಬಿಜೆಪಿ ಮುಖಂಡ ಜಿ.ನಂಜನಗೌಡ ಮಾತನಾಡಿ, ಬಳ್ಳಾರಿ ಶಾಸಕರು ಅಖಂಡ ಜಿಲ್ಲೆ ನೆಪದಲ್ಲಿ ವಿಜಯನಗರ ಜಿಲ್ಲೆ ವಿರೋಧಿಸುವುದು ಸರಿಯಲ್ಲ. ಪಶ್ಚಿಮ ತಾಲ್ಲೂಕಿನ ರೈತರು ಜಿಲ್ಲಾ ಕಚೇರಿಗೆ ಹೋಗಿ ಬರಲು ಆಗಲ್ಲ. ಹೀಗಾಗಿ ಜಿಲ್ಲೆ ವಿಭಜನೆ ಅನಿವಾರ್ಯವಾಗಿದೆ. ಅಖಂಡ ಜಿಲ್ಲೆ ಹೇಳಿಕೆ ವಾಪಾಸ್ ಪಡೆಯಬೇಕು. ಅನಂದಸಿಂಗ್ ಮಾದರಿಯಲ್ಲಿ ಸ್ಥಳೀಯ ಶಾಸಕರು ರಾಜೀನಾಮೆ ಬೆದರಿಕೆಯೊಡ್ಡಿ ಜಿಲ್ಲಾ ಕೇಂದ್ರ ಮಾಡಲು ಶ್ರಮಿಸಬೇಕು. ಹೊಸಪೇಟೆ ಜಿಲ್ಲೆ ಘೋಷಣೆ ತಪ್ಪಲ್ಲ, ಆದರೆ ಹರಪನಹಳ್ಳಿ ಕೂಡ ಜಿಲ್ಲೆ ಆಗಬೇಕು ಎಂದರು.
ಚನ್ನಬಸವ ಶಿವಯೋಗಿ ಸ್ವಾಮೀಜಿ, ಹೊಸಹಳ್ಳಿ ಮಲ್ಲೇಶ್ ಮಾತನಾಡಿ, ಸರ್ಕಾರ ತಜ್ಞರ ಸಮಿತಿ ನೇಮಕ ಮಾಡಿ ಅವರ ವರದಿ ಅಧಾರದ ಮೇಲೆ ಜಿಲ್ಲೆ ಘೋಷಣೆ ಮಾಡಲಿ. ಪ್ರತಿಯೊಂದು ತಾಲ್ಲೂಕಿನಲ್ಲಿ ಜಾಥ ನಡೆಸಿ, ಬಹಿರಂಗ ಸಭೆ ನಡೆಸಿ ಪಶ್ಚಿಮ ತಾಲೂಕಿಗೆ ಜಿಲ್ಲೆ ಬೇಕು ಎಂದು ಮನವರಿಕೆ ಮಾಡಿಕೊಡೋಣ. ಸಾಮಾಜಿಕ ನ್ಯಾಯಕ್ಕಾಗಿ ಜನರನ್ನು ಜಾಗೃತಗೊಳಿಸೋಣ. ಎಂ.ಪಿ.ರವೀಂದ್ರ ಮಾದರಿಯಲ್ಲಿ ಕರುಣಾಕರರೆಡ್ಡಿ ಬದ್ದತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಜೆ.ಓಂಕಾರಗೌಡ, ದೊಡ್ಡಮನೆ ಪ್ರಸಾದ್, ಬೂದಿನವೀನ್, ಕಲ್ಲಹಳ್ಳಿ ಗೋಣ್ಯೆಪ್ಪ, ಹುಲಿಕಟ್ಟಿ ರಹಮತ್, ಎಸ್.ಆರ್.ತಿಮ್ಮಣ್ಣ ಮತ್ತಿತರರು ಭಾಗವಹಿಸಿದ್ದರು.