
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮೇ.26: ನಾನು ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಸಭೆಗೆ ಗೆದ್ದಿರುವುದರಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ದೃಷ್ಟಿಯಿಂದ ನಾನು ಕಾಂಗ್ರೇಸ್ ಪಕ್ಷದ ಸಹ
ಸದಸ್ಯತ್ವ ಪಡೆದಿದ್ದೇನೆ ಎಂದು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ ಹೇಳಿದರು. ಶಾಸಕಿಯಾಗಿ ಗೆಲುವು ಸಾಧಿಸಿದ ನಂತರ ಮೊದಲ ಬಾರಿಗೆ ಕೊಟ್ಟೂರಿನ ಶ್ರೀಗುರು
ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಆಗಮಿಸಿದಾಗ 1೦1 ತೆಂಗಿನಕಾಯಿಯನ್ನು ಪಾದಗಟ್ಟೆಗೆ ಒಡೆದು ದರ್ಶನ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ರೂಢ ಸರ್ಕಾರದೊಂದಿಗೆ ಕೈಜೋಡಿಸಿದರೆ ಮಾತ್ರ ಕ್ಷೇತ್ರವನ್ನು ಅಭಿವೃದ್ದಿ ಸಾಧ್ಯ. ನನ್ನ ಸಹೋದರ ಶಾಸಕನಾಗಿದ್ದಾಗಿನ ಹಲವಾರು ಕಾಮಗಾರಿಗಳು ಸ್ಥಗಿತಗೊಂಡಿವೆ. ಅವುಗಳನ್ನು ಪೂರ್ಣಗೊಳಿಸಬೇಕು ಎಂದರು.
ನನ್ನ ಕ್ಷೇತ್ರದ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ಕೊಡುವುದರಲ್ಲಿ ಎರಡು ಮಾತಿಲ್ಲ. ಆ ವಿಶ್ವಾಸ ನನಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಹುಡುಗಿಯರು ಶಿಕ್ಷಣದಿಂದ ವಂಚಿತರಾಗಬಾರದು. ಹಿಂಜರಿಕೆ ಬಿಟ್ಟು ಉನ್ನತ ಶಿಕ್ಷಣ ಪಡೆಯುವಲ್ಲಿ ಯಶಸ್ವಿಯಾಗಬೇಕು. ಇದಕ್ಕಾಗಿ ನನ್ನ ಕ್ಷೇತ್ರದಲ್ಲಿ ಹಾಸ್ಟೆಲ್ ಇತರೆ ಸೌಲಭ್ಯಗಳನ್ನು ಒದಗಿಸಿಕೊಡುತ್ತೇನೆ ಎಂದರು.
ಕ್ಷೇತ್ರದ 6೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ನಡೆಯುತ್ತಿದೆ. ಅದನ್ನು
ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕಿ ಪತಿ ಮಲ್ಲಿಕಾರ್ಜುನ, ಅಡಕಿ ಮಂಜುನಾಥ, ಕಮಲಮ್ಮ, ಅಶೋಕ ಇಂಜಿನೀಯರ್, ಶಿವಕುಮಾರಗೌಡ, ಗಜಾಪುರ ಸತೀಶ, ವಿನಯ್ ಮುಂತಾದವರಿದ್ದರು.