ಹರಪನಹಳ್ಳಿ ಕ್ಷೇತ್ರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಮತ ಪ್ರಚಾರ


ಸಂಜೆವಾಣಿವಾರ್ತೆ
ಹರಪನಹಳ್ಳಿ.1;ಲೋಕಸಭಾ ಚುನಾವಣೆಯಲ್ಲಿ ನನಗೆ ಮತ ಹಾಕಿ ಗೆಲ್ಲಿಸಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾಮಲ್ಲಿಕಾರ್ಜುನ ಮತದಾರರಿಗೆ ಮನವಿ ಮಾಡಿಕೊಂಡರು.ಪಟ್ಟಣದ ತರಳ ಬಾಳು ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬಿಜೆಪಿ ದೇಶದಲ್ಲಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಲಿದೆ, ಬರ ಅನುದಾನ ನಮ್ಮ ರಾಜ್ಯಕ್ಕೆ ನೀಡಿಲ್ಲ ಎಂದು ದೂರಿದರು. ನನಗೆ ಮತಹಾಕಿ ಗೆಲ್ಲಿಸಿದರೆ ತ್ರಿಬಲ್ ಇಂಜಿನ ಸರ್ಕಾರವಾಗುತ್ತದೆ, ಇಲ್ಲಿ ಎಂ.ಪಿ.ಲತಾ ಶಾಸಕರಿದ್ದಾರೆ, ದಾವಣಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ ಇದ್ದಾರೆ, ನಾನು ಗೆದ್ದರೂ ಮೂರನೇ ಇಂಜಿನ್ ಆಗಿ ಕೆಲಸ ಮಾಡುತ್ತೇನೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಎಂದು ಹೇಳಿದರು.
ನಮ್ಮ ಮನೆ. ಮನಸ್ಸಿನ ಬಾಗಿಲು ಯಾವಾಗಲೂ ತೆಗೆದಿರುತ್ತೆ, ನಾನು ನಮ್ಮ ಮಾವ ಶಾಮನೂರು ಶಿವಶಂಕರಪ್ಪ ಹಾಗೂ ಪತಿ ಎಸ್‌ಎಸ್ ಮಲ್ಲಿಕಾರ್ಜುನರವರಿಂದ ಸಮಾಜಸೇವೆಯಿಂದ ಸಾಕಷ್ಟು ಕಲಿತಿದ್ದೇನೆ ಎಂದ ಅವರು ದಾವಣಗೆರೆಯಲ್ಲಿ ಎಸ್‌ಎಸ್ ಟ್ರಸ್ಟ್ನಿಂದ ಬಿಪಿಎಲ್‌ನವರಿಗೆ ಈಗಾಗಲೇ ಉಚಿತ ಡಯಾಲಿಸಿಸ್, ಮಹಿಳೆಯರಿಗೆ ಉಚಿತ ಡಿಲವರಿ, ಕಣ್ಣಿನ ಪೊರೆ ಚಿಕಿತ್ಸೆ ದಂತ ಚಿಕಿತ್ಸೆ ಹೀಗೆ ಅನೇಕ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಕ್ಕೂ ವಿಸ್ತರಿಸುತ್ತೇವೆ ಎಂದು ತಿಳಿಸಿದರು.