ಹರಪನಹಳ್ಳಿ:   ಕಾಂಗ್ರೆಸ್  ಅಭ್ಯರ್ಥಿ ಎನ್.ಕೊಟ್ರೇಶ್  ನಾಮಪತ್ರ ಸಲ್ಲಿಕೆ

ಹರಪನಹಳ್ಳಿ.ಏ.೨೦ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್.ಕೊಟ್ರೇಶಿ ಅವರು ಸಾವಿರಾರು ಕಾರ್ಯಕರ್ತರೊಂದಿಗೆ ಒಂದೇ ದಿನ ಪ್ರತ್ಯೇಕ ಸಮಯದಲ್ಲಿ ಎರಡು ಸಲ ನಾಮಪತ್ರ ಸಲ್ಲಿಸಿದರು. ಬೆಳಿಗ್ಗೆ 10 ಗಂಟೆಗೆ ತಾಲ್ಲೂಕು ಆಡಳಿತ ಸೌಧಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿ, ಕೋಟೆ ಆಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಮದ್ಯಾಹ್ನ 2 ಗಂಟೆಯ ನಂತರ ಮತ್ತೊಂದು ನಾಮಪತ್ರ ಸಲ್ಲಿಸಿದರು.ಸಾವಿರಾರು ಕಾರ್ಯಕರ್ತರು ತಾಲ್ಲೂಕು ಆಡಳಿತ ಸೌಧದವರೆಗೂ ಕಾಲ್ನಡಿಗೆಯಲ್ಲಿ ತೆರಳಿದರು. ಬಂದಿದ್ದ ಕಾರ್ಯಕರ್ತರಿಗೆ ಪ್ಲಾಸ್ಟಿಕ್ ಚೀಲದಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್ ಬಾವುಟ, ಟೋಪಿಗಳು ರಾರಾಜಿಸಿದವು.ಅಭ್ಯರ್ಥಿ ಎನ್.ಕೊಟ್ರೇಶಿ ಅವರು, ಆಡಳಿತ ಪಕ್ಷದ ಶಾಸಕರು ಕೆರೆಗೆ ನೀರು ತುಂಬಿಸುವ ಯೋಜನೆಯು ಅಪೂರ್ಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಕ್ಷೇತ್ರದಲ್ಲಿ ಆಡಳಿತ ಪಕ್ಷದ ವಿರೋಧಿ ಅಲೆಯಿದ್ದು, ಎರಡು ಬಾರಿ ಸೋಲು ಕಂಡಿರುವ ನನ್ನ ಮೇಲೆ ವಿಶ್ವಾಸವಿಟ್ಟು ಈ ಬಾರಿ ಜನರು ಗೆಲ್ಲಿಸಿದರೆ, ತಾಲ್ಲೂಕಿನ ಜನ ಗುಳೆ ಹೋಗುವುದನ್ನು ತಪ್ಪಿಸಲು ಪರ್ಯಾಯ ಯೋಜನೆ ರೂಪಿಸುತ್ತೇನೆ. ಕ್ಷೇತ್ರದ ಜನರ ಮಹತ್ವಕಾಂಕ್ಷೆ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಎನ್.ಕೊಟ್ರೇಶಿ ಕುಟುಂಬ ಆಸ್ತಿಯು 5 ವರ್ಷಗಳಲ್ಲಿ ಬರೋಬ್ಬರಿ 46.72 ಕೋಟಿ ಹೆಚ್ಚಳವಾಗಿದೆ.ಈ ಬಾರಿ ಕುಟುಂಬದ ಒಟ್ಟು ಆಸ್ತಿ 59.01 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸೋಲು ಕಂಡಿದ್ದ ಅವರು 12.28 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಆಗ 5.23 ಸಾಲ ಹೊಂದಿದ್ದ ಅವರು ಈಗ 15.80 ಕೋಟಿ ಹಾಗೂ ಪತ್ನಿ ಎನ್.ಸವಿತ ಹೆಸರಿಗೆ 7.09 ಲಕ್ಷ ಸಾಲ ಇದೆ.ಎನ್.ಕೊಟ್ರೇಶಿ ಅವರ ಚರಾಸ್ತಿ 18.81 ಕೋಟಿ, ಸ್ಥಿರಾಸ್ತಿ 32.96 ಕೋಟಿ. ಪತ್ನಿಯ ಚರಾಸ್ತಿ 5.63 ಕೋಟಿ, ಸ್ಥಿರಾಸ್ತಿ 8 ಲಕ್ಷ, ಪುತ್ರಿಯರಾದ ಎನ್.ಅಕ್ಷರ ಹಾಗೂ ಎನ್.ವಸುಂಧರ ಅವರುಗಳ ಹೆಸರಿನಲ್ಲಿ ತಲಾ 38.01 ಲಕ್ಷ ಚರಾಸ್ತಿ ಇದೆ.ಎನ್.ಕೊಟ್ರೇಶಿ ಮತ್ತು ಪತ್ನಿ ಎನ್. ಸವಿತ ದಂಪತಿ ಅಕ್ಷರ ಸೀಡ್ಸ್ ಅಂಡ್ ಸರ್ವಿಸಸ್ ಕಂಪನಿಯಲ್ಲಿ 8.48, ಅಟ್ಲಾಸ್ ಸೀಡ್ಸ್ ಅಂಡ್ ಸರ್ವಿಸಸ್ ನಲ್ಲಿ 11.44 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದಾರೆ. ಇಬ್ಬರ ಬಳಿ 2520 ಗ್ರಾಂ ಬಂಗಾರ, 20 ಕೆ.ಜಿ.ಬೆಳ್ಳಿ ಇದೆ. 43 ಎಕರೆ ಕೃಷಿ ಭೂಮಿ ಇದೆ. ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಅಗ್ರಿ)ಯನ್ನು 2001ರಲ್ಲಿ ಪೂರ್ಣಗೊಳಿಸಿದ್ದಾರೆ.ಈ ಸಂದರ್ಭದಲ್ಲಿ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ, ಬ್ಲಾಕ್ ಅಧ್ಯಕ್ಷರಾದ ಬೇಲೂರು ಅಂಜಪ್ಪ, ಪ್ರೇಮಕುಮಾರ, ಕಮ್ಮತ್ತಹಳ್ಳಿ ಮಂಜುನಾಥ್, ಮುಖಂಡರಾದ ಶಶಿಧರ್ ಪೂಜಾರ್, ಚಂದ್ರಶೇಖರ ಭಟ್, ಹೆಚ್.ಬಿ.ಪರಶುರಾಮಪ್ಪ, ಮತ್ತಿಹಳ್ಳಿ ಅಜ್ಜಣ್ಣ ಇದ್ದರು.