
ಸಂಜೆವಾಣಿ ವಾರ್ತೆ
ಹೊಸಪೇಟೆ ಆ.3: ಇತ್ತೀಚೆಗೆ ಹರಪನಹಳ್ಳಿ ತಾಲ್ಲೂಕಿನಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳನ್ನು ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಬುಧವಾರ ಹರಪನಹಳ್ಳಿ ಉಪವಿಭಾಗಕ್ಕೆ ಭೇಟಿ ನೀಡಿದ ಅವರು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಅಲ್ಲಿನ ಸ್ವಚ್ಚತೆ, ನೈರ್ಮಲ್ಯ ಪರಿಶೀಲನೆ ನಡೆಸಿದರು. ರೋಗಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ವಿವಿಧ ಚಿಕಿತ್ಸೆಗಳಿಗೆ ಅವಶ್ಯವಿರುವ ಉಪಕರಣಗಳು ಮತ್ತು ಔಷಧಿಗಳ ಮಾಹಿತಿಯನ್ನು ವೈದ್ಯಾಧಿಕಾರಿಗಳಿಂದ ಪಡೆದುಕೊಂಡು, ಚಿಕಿತ್ಸೆಗಳಿಗೆ ಯಾವುದೇ ಕೊರತೆಯಾಗದಂತೆ ಸ್ನೇಹಪೂರಕವಾಗಿ ರೋಗಿಗಳನ್ನು ತಪಾಸಣೆ ಮಾಡಬೇಕೆಂದು ಸಿಬ್ಬಂದಿಗೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಆಮ್ಲಜನಕ ಘಟಕಕ್ಕೆ ಘಟಕಕ್ಕೆ ಬೇಟಿ ನೀಡಿ ದುರಸ್ತಿ ಕ್ರಮ ಕೈಗೊಳ್ಳಲು ಸೂಚಿಸಿದರು. ಆಸ್ಪತ್ರೆ ಆವರಣದಲ್ಲಿ ಸ್ವಚ್ಚತೆ ಕಾಪಾಡಿ, ಚರಂಡಿ ವ್ಯವಸ್ಥೆ ದುರಸ್ತಿ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಉಪನೋಂದಣಿ ಕಚೇರಿ ಸ್ಥಳಾಂತರಕ್ಕೆ ಸೂಚನೆ:
ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹರಪನಹಳ್ಳಿ ಉಪ ನೋಂದಣಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದ ದುರಸ್ತಿಗೊಳಗಾದ ಕಚೇರಿಯನ್ನು ಅತಿಥಿ ಗೃಹದಲ್ಲಿರುವ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ಕೊಠಡಿ ಪಡೆದು ಆ.14ರ ಒಳಗಾಗಿ ಕಚೇರಿಯನ್ನು ಸ್ಥಳಾಂತರಗೊಳಿಸಲು ಸೂಚಿಸಿದರು. ಕಚೇರಿಗೆ ಅಗತ್ಯವಿರುವ ವಿದ್ಯುತ್ ಸಂಪರ್ಕ ಪಡೆದು ದಾಖಲೆಗಳನ್ನು ರಕ್ಷಿಸಿ ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಸಿದರು.
ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.