ಹರಪನಹಳ್ಳಿಯಲ್ಲಿ ಸಿಡಿಲಿಗೆ ಹಸು ಸಾವು, ಧರೆಗುರುಳಿದ ಮರಗಳು.

ಸಂಜೆವಾಣಿವಾರ್ತೆ

ಹರಪನಹಳ್ಳಿ,ಏ.೧೯: ಹರಪನಹಳ್ಳಿ ಪಟ್ಟಣ ಸೇರಿದಂತೆ ವಿವಿಧೆಡೆ ಗುರುವಾರ ಮದ್ಯಾಹ್ನ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಯಿತು.ತಾಲೂಕಿನ ಕೊಮಾರನಹಳ್ಳಿ ಗ್ರಾಮದಲ್ಲಿ ಚಂದ್ರಪ್ಪ ಎಂಬುವವರಿಗೆ ಸೇರಿದ ಹಸು ಸಿಡಿಲಿಗೆ ಬಲಿಯಾಗಿದೆ.ಮಾಡ್ಲಗೇರಿ ತಾಂಡದಲ್ಲಿ ಮೋತಿನಾಯ್ಕ ಹಾಗೂ ಕಲಿಭೀಮನಾಯ್ಕ ರವರ ಮನೆ ಮೇಲ್ಚಾವಣೆ ಗಾಳಿಗೆ ಹಾರಿ ಹೋಗಿವೆ,ಕೋಡಿಹಳ್ಳಿ ಸಮೀಪ ವಿದ್ಯುತ್ ಕಂಬ ಉರುಳಿದೆ, ಬಾಗಳಿ, ಶೃಂಗಾರತೋಟ,ಚಿಕ್ಕಹಳ್ಳಿ, ಕಾಯಕದಹಳ್ಳಿ, ಕೋಡಿಹಳ್ಳಿ, ಮುಂತಾದ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ, ಯಲ್ಲಾಪುರ ಗ್ರಾಮದ ರಸ್ತೆ ಮದ್ಯೆ ದೊಡ್ಡದಾದ ಮರ ಉರುಳಿ ಸಂಚಾರಕ್ಕೆ ಸ್ವಲ್ಪ ಹೊತ್ತು ಅಡಚಣೆ ಉಂಟಾಗಿತ್ತು.ಪಟ್ಟಣದ ತಾಯಮ್ಮನ ಹುಣಸಿಮರ, ಗ್ರಂಥಾಲಯ ಕಚೇರಿ ಬಳಿ, ತೆಗ್ಗಿನಮಠದ ಹತ್ತಿರ ರಸ್ತೆ ತುಂಬೆಲ್ಲಾ ನೀರು ಸಂಗ್ರಹವಾಗಿ ಸಾರ್ವಜನಿಕರಿಗೆ, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಾಲೂಕು ಪಂಚಾಯ್ತಿ ಆವರಣದಲ್ಲಿ ಎರಡು ಮರಗಳು ಧರೆಗೆ ಉರುಳಿವೆ.ಪಟ್ಟಣದ ವಾಲ್ಮೀಕಿ ನಗರ,ಹಾಲಸ್ವಾಮಿ ಮಠದ ವೃತ್ತದ ಬಳಿ ಬೇವಿನ ಮರ ಉರುಳಿ ಬಿದ್ದಿದೆ.ತಾಯಮ್ಮನ ಹುಣಸೇಮರದ ಬಳಿ ಅವೈಜ್ಞಾನಿಕ ಸಿ ಡಿ ಮಾಡಿರುವುದರಿಂದ ರಸ್ತೆಯಲ್ಲಿ ನೀರು ಸಂಗ್ರಹವಾಗಿ ಚರಂಡಿ ನೀರಿನ ಜೊತೆ ಸೇರಿ ಜನರಿಗೆ, ವಾಹನ ಸವಾರರಿಗೆ ತೊಂದರೆ ಯುಂಟಾಗುತ್ತದೆ ಎಂಬುದು ಆ ಭಾಗದ ಜನರ ಅಳಲಾಗಿದೆ.ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಸ್ವಲ್ಪ ತಂಪಾದಂತಾಗಿದೆ.