ಹರಪನಹಳ್ಳಿಯಲ್ಲಿ ಶ್ರದ್ದಾಭಕ್ತಿಯ ಶಿವರಾತ್ರಿ ಆಚರಣೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಮಾ.9; ತಾಲೂಕಿನಲ್ಲಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಮಹಾ ಶಿವರಾತ್ರಿ ಯನ್ನು ಶುಕ್ರವಾರ ಭಕ್ತರು ಆಚರಿಸಿದರು.
ಪಟ್ಟಣದ ಗೋಕರ್ಣೇಶ್ವರ ದೇವಾಲಯ, ನಗರೇಶ್ವರ, ಎಸ್ ಬಿಎಂ ಬಳಿ ಇರುವ ಹಾಗೂ ಗಣೇಶ ದೇವಸ್ಥಾನದ ಶಿವ ದೇವಾಲಯ, ಬೆಸ್ಕಾಂ ಕಛೇರಿ ಬಳಿ, ಕೊಟ್ಟೂರು ರಸ್ತೆ ಚೌಕಿಯಲ್ಲಿರುವ ಶಿವನ ದೇವಾಲಯ ಹೀಗೆ ವಿವಿಧೆಡೆ ಶಿವ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಅನೇಕರು ಉಪವಾಸ ವಿದ್ದು, ಶಿವನಿಗೆ ಭಕ್ತಿ ಸಮರ್ಪಿಸಿದರು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಬಾಗಳಿಯ ಐತಿಹಾಸಿಕ ಕಲ್ಲೇಶ್ವರ ದೇವಾಲಯದಲ್ಲಿ ಬೇರೆ ಬೇರೆ ಗ್ರಾಮಗಳ ಭಕ್ತರು ಆಗಮಿಸಿ ಅಭಿಷೇಕ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಇಷ್ಟಲಿಂಗದೇವರು, ಸಂಗನಬಸವೇಶ್ವರ, ವೀರಭದ್ರೇಶ್ವರ, ಕನಕೇಶ್ವರ ದೇವಸ್ಥಾನಗಳಲ್ಲಿ ಸಹ ವಿಶೇಷ ಪೂಜೆ ನೇರವೇರಿಸಲಾಯಿತು.
ಕೂಲಹಳ್ಳಿಯ ಗೋಣಿಬಸವೇಶ್ವರ, ನೀಲಗುಂದ ಬೀಮೇಶ್ವರ ದೇವಸ್ಥಾನಗಳಲ್ಲಿ ಆಕರ್ಷಕ ಪೂಜೆ ನೆರವೇರಿತ್ತು, ಗೋಕರ್ಣೇಶ್ವರ ದೇವಾಲಯದಲ್ಲಿ ಉದ್ದದ ಸಾಲುಗಟ್ಟಿ ಭಕ್ತರು ಶಿವನ ದರ್ಶನ ಪಡೆದರು. ದಿ.ವಕೀಲ ದಿವಾಕರ ಕುಟುಂಬದವರು ಪ್ರಸಾದ ವಿತರಣೆ ನಡೆಸಿದರು. ಅರ್ಚಕ ಸತೀಶ ಇತರರು ಇಲ್ಲಿ ಪೂಜಾ ಕಾರ್ಯದಲ್ಲಿ ತೊಡಗಿದ್ದರು. ಬೆಳಿಗ್ಗೆಯಿಂದಲೇ ಭಕ್ತರು ಶಿವನ ದೇವಾಲಯಗಳಿಗೆ ತೆರಳಿದರೂ ಸಂಜೆ ಹೊತ್ತಿಗೆ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಮಾರುಕಟ್ಟೆಯಲ್ಲಿ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಕಿತ್ತಾಳೆ ಹಣ್ಣು ಸೇರಿದಂತೆ ವಿವಿಧ ಬಗೆಯ ಹಣ್ಣುಗಳಿಗೆ ಭಾರಿ ಬೇಡಿಕೆ ಉಂಟಾಗಿತ್ತು. ಹೂವು, ಕಾಯಿ ವ್ಯಾಪಾರ ಜೋರಾಗಿತ್ತು, ಬೆಲೆಯೂ ಎಂದಿಗಿಂತ ಸಾಕಷ್ಟು ಹೆಚ್ಚಾಗಿತ್ತು, ಆದರೂ ಜನರ ಖರೀದಿಗೆ ಬರವಿದ್ದಿಲ್ಲ.