ಹರಪನಹಳ್ಳಿಯಲ್ಲಿ ವಿಶ್ವವಿದ್ಯಾಲಯ ಮಾಡಲು 100ಎಕರೆ ಜಮೀನು: ಶಾಸಕಿ ಎಂ.ಪಿ.ಲತಾ ಭರವಸೆ

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಮಾ.1; ಹರಪನಹಳ್ಳಿ ಪಟ್ಟಣದಲ್ಲಿ ಆರಂಭವಾಗಿರುವ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ 100 ಎಕರೆ ಭೂಮಿ ನೀಡಲು ಪ್ರಯತ್ನ ಮಾಡುವುದಾಗಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಭರವಸೆ ನೀಡಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೊಸ ಕಟ್ಟಡದಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ತಾತ್ಕಾಲಿಕವಾಗಿ ಮಂಜೂರಾಗಿರುವ ನಾಲ್ಕು ಕೊಠಡಿಗಳಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಚೇರಿಯನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು. ಈಗಾಗಲೇ ತಹಶೀಲ್ದಾರ ಬಳಿ 50 ಎಕರೆ ಭೂಮಿ ನೀಡುವ ಕುರಿತು ಚರ್ಚಿಸಿದ್ದು, ಇನ್ನೂ 50 ಎಕರೆ ಅಂದರೆ 100 ಎಕರೆ ಭೂಮಿಯನ್ನು ಸರ್ಕಾರದಿಂದ ಕೊಡಿಸಲು ಸಕಲ ಪ್ರಯತ್ನ ಮಾಡುತ್ತೇನೆ, ಮುಂದಿನ ದಿನಗಳಲ್ಲಿ ಇಲ್ಲಿಯೇ ವಿಶ್ವ ವಿದ್ಯಾಲಯ ಸ್ಥಾಪನೆ ಆಗಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.ಹರಪನಹಳ್ಳಿ ಶೈಕ್ಷಣಿಕ ಹಬ್ ಆಗಿದ್ದು, ಇಲ್ಲಿಯ ಸಾಕಷ್ಟು ವಿದ್ಯಾರ್ಥಿಗಳು ಸ್ನಾತಕೋತ್ತರ ಕೋರ್ಸಗಳ ಅಧ್ಯಯನ ಮಾಡಲು ದೂರದ ನಗರಗಳಿಗೆ ಹೋಗುತ್ತಿರುವುದನ್ನು ಮನಗಂಡು ಇಲ್ಲಿ ಪಿ.ಜೆ.ಸೆಂಟರ್ ತೆರೆಯಲಾಗಿದೆ ಎಂದ ಅವರು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ ಶಾಸಕರು ಇದರ ಸದುಪಯೋಗವನ್ನು ಹರಪನಹಳ್ಳಿ ಸೇರಿದಂತೆ ಸುತ್ತ ಮುತ್ತಲ ತಾಲೂಕುಗಳ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕೋರಿದರು.