
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಏ.30: ದಿವಂಗತ ಎಂ.ಪಿ.ಪ್ರಕಾಶ್ ಅವರ ಪುತ್ರಿ ಲತಾ ಮಲ್ಲಿಕಾರ್ಜುನ್ ಅವರಿಗೆ ಪಕ್ಷೇತರರಾಗಿ ಸ್ಪರ್ಧೆ ಮಾಡುವಂ ತೆ ನಾನು ಹೇಳಿಲ್ಲ. ರಾಜಕೀಯ ಜೀವನದ ಲ್ಲಿ ನಾನು ಯಾವತ್ತೂ ಹಿಂದೊಂದು, ಮುಂದೊಂದು ಮಾಡುವವನಲ್ಲ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪಕ್ಷೇತರ ಅಭ್ಯರ್ಥಿ ವಿರುದ್ಧ ಕಿಡಿಕಾರಿದರು.
ಪಟ್ಟಣದ ಎಚ್.ಪಿ.ಎಸ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್‍ನಿಂದ ಶನಿವಾರ ಆಯೋಜಿಸಿದ್ದ ಮತ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅರಸೀಕೆರೆ ಎನ್.ಕೊಟ್ರೇಶ್ ಪರ ಮತಯಾಚಿಸಿ ಮಾತನಾಡಿ, ‘ಪಕ್ಷೇತರರಾಗಿ ನಿಂತು ಕೈಸುಟ್ಟಕೊಳ್ಳದೆ, ನಾಮಪತ್ರ ಹಿಂಪಡೆದು ಕೊಟ್ರೇಶ್ ಪರ ಕೆಲಸ ಮಾಡು, ಮುಂದೆ ಏನಾದರೂ ಸಹಾಯ ಮಾಡೋಣ ಎಂದು ಹೇಳಿದ್ದೆ. ಆದರೆ ನಾನೇ ಪಕ್ಷೇತರ ನಿಲ್ಲುವಂತೆ ಹೇಳಿದ್ದೇನೆ ಎಂದು ಲತಾ ಮಲ್ಲಿಕಾರ್ಜುನ್ ಜನರೆದುರು ಹೇಳುತ್ತಿದ್ದರೆ, ಅವರು ರಾಜಕೀಯದಲ್ಲಿರಲು ನಾಲಾಯಕ್. ಪಕ್ಷೇತರ ಅಭ್ಯರ್ಥಿಯ ಮಾತನ್ನು ಯಾರೂ ನಂಬಬಾರದು. ಅವರನ್ನು ಪಕ್ಷದಿಂದ ಹೊರ ಹಾಕುತ್ತೇವೆ. ಈಗಲೂ ಕಣದಿಂದ ಲತಾ ನಿವೃತ್ತಿ ಹೊಂದಿ ಎನ್.ಕೊಟ್ರೇಶ್ ಪರ ಕೆಲಸ ಮಾಡುವಂತೆ ಸಭೆಯ ಮೂಲಕ ಸೂಚಿಸುತ್ತೇನೆ ಎಂದರು.
ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ಕ್ಷೇತ್ರದಲ್ಲಿ 75 ವರ್ಷದ ಬಳಿಕ ವೀರಶೈವರಿಗೆ ಪ್ರಥಮ ಬಾರಿಗೆ ಟಿಕೆಟ್ ಸಿಕ್ಕಿದೆ. ಅಭ್ಯರ್ಥಿ ಕೊಟ್ರೇಶ್ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ಅರಸೀಕೆರೆ ಎನ್ ಕೊಟ್ರೇಶ್ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಸೋತಿರುವೆ. ಈ ಬಾರಿ ಸೇವೆ ಮಾಡಲು ಅವಕಾಶ ಮಾಡಿಕೊಡಿ’ ಎಂದರು.
ಲಿಂಗಾಯತರಿಗೆ ಬಿಜೆಪಿ ಅ ಗೌರವ ಬಿಜೆಪಿ ಮಾತ್ರ ಲಿಂಗಾಯತರನ್ನು ರಕ್ಷಿಸುತ್ತಾರೆ ಎಂಬುದುದ ಸುಳ್ಳು. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಕಣ್ಣೀರು ಹಾಕಿಸಿದರು. ಜಗದೀಶ ಶೆಟ್ಟರ್, ಲಕ್ಷ್ಮಣ್ ಸವದಿಯಂತಹ ನಾಯಕರನ್ನು ಪಕ್ಷದಿಂದ ತೆಗೆದು ಹಾಕಿದ್ದಾರೆ. ವೀರಶೈವ ಲಿಂಗಾಯತರಿಗೆ ಬಿಜೆಪಿಯು ಅಗೌರವ ತೋರಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು.
ಜೀವಂತ ದಾಖಲೆ ಸಾಕಾಗಲ್ವಾ?ಬಿಜೆಪಿ ಸರ್ಕಾರದ ಶೇ.40 ಕಮಿಷನ್ ಬಗ್ಗೆ ತನಿಖೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸದನದಲ್ಲಿ ಆಗ್ರಹಿಸಿದೆ. ಆದರೆ, ಅವರು ದಾಖಲೆ ಕೊಡಿ ಎಂದು ಕೇಳುತ್ತಾರೆ. ಎಡಿಜಿಪಿ ಆಫೀಸರ್ ಜೈಲಿಗೆ ಹೋಗಿದ್ದಾರೆ, ಸಂತೋಷ್ ಸಾವಿನಿಂದಾಗಿ ಈಶ್ವರಪ್ಪ ರಾಜೀನಾಮೆ ಕೊಟ್ಟರು. ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲಂಚ ಪಡೆಯುವಾಗ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ. ತನಿಖೆ ಮಾಡಲು ಜೀವಂತ ದಾಖಲೆಗಳು ಸಾಕಲ್ವಾ ಎಂದು ಸಿದ್ದರಾಮಯ್ಯ ಅವರು ಸಿಎಂ ಬೊಮ್ಮಾಯಿಗೆ ಪ್ರಶ್ನಿಸಿದರು.
ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ಕಂಬಳಿ ಹೊದಿಸಿ, ಕುರಿಮರಿ ಕೊಟ್ಟು ಸನ್ಮಾನಿಸಿದರು. ಎಡಿಬಿ ಕಾಲೇಜ್ ಮೈದಾನಕ್ಕೆ ಬಂದಿಳಿದ ಸಿದ್ದರಾಮಯ್ಯ ಅವರ ಹೆಲಿಕಾಫ್ಟರ್ ಅನ್ನು ಚುನಾವಣೆ ಆಯೋಗದ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಎಂ.ಎಲ್.ಸಿ.ಅಬ್ದುಲ್ ಜಬ್ಬಾರ್ ಸಾಬ್, ಪ್ರಕಾಶ್ ರಾಥೋಡ್, ಬ್ಲಾಕ್ ಸಮಿತಿ ಅಧ್ಯಕ್ಷರಾದ ಬೇಲೂರು ಅಂಜಪ್ಪ, ಎಸ್. ಮಂಜುನಾಥ್, ಪ್ರೇಮಕುಮಾರ, ಮುಖಂಡರಾದ ಶಶಿಧರ.ಪೂಜಾರ್, ಪರಶುರಾಮಪ್ಪ, ಅಂಬಾಡಿ ನಾಗರಾಜ್, ಹಾಲೇಶ್ ಗೌಡ, ಇತರರು ಇದ್ದರು.