ಹರಪನಹಳ್ಳಿಗೆ ಆನಂದಸಿಂಗ್ ಬೇಟಿ

ಹರಪನಹಳ್ಳಿ.ಏ.೨೮;- ನಾಳೆ‌ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ ಸಿಂಗ್ ಹರಪನಹಳ್ಳಿ ತಾಲ್ಲೂಕಿಗೆ ಭೇಟಿ ನೀಡಲಿದ್ದಾರೆ. ತಾಲ್ಲೂಕಿಗೆ ಆನಂದಸಿಂಗ್ ರವರ ಭೇಟಿ ಪ್ರಥಮ ಬಾರಿಯಾಗಿದ್ದು, ಜನರಲ್ಲಿ ನಿರೀಕ್ಷೆಗಳು ಕೂಡ ಹೆಚ್ಚಾಗಿವೆ. ನೂತನ ವಿಜಯ ನಗರ ಜಿಲ್ಲೆ ರಚನೆಯ ನಂತರ ಹರಪನಹಳ್ಳಿಗೆ ಭೇಟಿ ನೀಡಲು ಹಲವು ಬಾರಿ ಕಾರ್ಯಕ್ರಮ ರೂಪಗೊಂಡಿತ್ತಾದರೂ ಕೋವಿಡ್-19 ಕಾರಣಕ್ಕೆ ಕಾರ್ಯಕ್ರಮ ನಿಗದಿಯಾಗಿರಲಿಲ್ಲ. ನೂತನ ವಿಜಯನಗರ ಜಿಲ್ಲೆ ರಚನೆ ಸಂದರ್ಭದಲ್ಲಿ ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿ ಮೊದಲು ವಿರೋಧಿಸಿದ್ದರೂ ಕೂಡ ನಂತರದಲ್ಲಿ ಈ ಕುರಿತಾಗಿ ಯಾವುದೇ ವಿರೋಧಾಭಾಸಗಳು ಕಂಡುಬಂದಿರಲಿಲ್ಲ.ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೆ ಯಾವುದೇ ಸಚಿವರು ಹರಪನಹಳ್ಳಿಗೆ ಭೇಟಿ ನೀಡದಿರುವ ಹಿನ್ನೆಲೆಯಲ್ಲಿ, ಇದೀಗ ಮೊದಲ ಬಾರಿಗೆ ಕೋರೊನಾ ಸ್ಥಿತಿಗತಿ ಮೇಲ್ವಿಚಾರಣೆ ಕುರಿತು ಸಧಿಕಾರಿಗಳೊಂದಿಗೆ ಚರ್ಚಿಸಲು ಗುರುವಾರ ಏ. 29ರಂದು ಬಳ್ಳಾರಿ ಉಸ್ತುವಾರಿ ಸಚಿವ ಹಾಗೂ ಮೂಲ ಸೌಕರ್ಯ ಅಭಿವೃದ್ದಿ ಸಚಿವ ಆನಂದ ಸಿಂಗ್ ಹರಪನಹಳ್ಳಿಗೆ ಬೇಟಿ ನೀಡಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ತಾಲುಕು ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್-19 ಸ್ಥಿತಿಗತಿ ಹಾಗೂ ಈ ವರೆಗೂ ತೆಗೆದುಕೊಂಡ ಪರೀಶೀಲನೆಗಳ ಕುರಿತು ಸಚಿವ ಆನಂದ ಸಿಂಗ್ ಸಭೆ ನಡೆಸಲಿದ್ದಾರೆ. ಬಳಿಕ ಹೂವಿನ ಹಡಗಲಿಗೆ ತೆರಳಲಿದ್ದಾರೆ. ಇಮ್ಮಡಿಗೊಂಡ ನಿರೀಕ್ಷೆಗಳು…ಕಳೆದ ವರ್ಷ ಕೋವಿಡ್ ಮಹಾಮಾರಿ ಹೆಮ್ಮಾರಿಯಾಗಿ ಕಾಡಿದ ಸಂಧರ್ಭದಲ್ಲಿ ಹರಪನಹಳ್ಳಿ ತಾಲ್ಲೂಕಿನ ಜನತೆ ಉಸ್ತುವಾರಿ ಸಚಿವ ಆನಂದ ಸಿಂಗ್ ರವರ ಸಹಾಯ ನಿರೀಕ್ಷಿಸಿದ್ದರು. ಏಕಾಏಕಿ ಜಾರಿಗೊಂಡ ಲಾಕ್ ಡೌನ್ ದಿಂದಾಗಿ ತಾಲ್ಲೂಕಿನ ಕೂಲಿ ಕಾರ್ಮಿಕರು, ನಿರ್ಗತಿಕರು ಹಾಗೂ ದಿನಗೂಲಿ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೀಡಾಗಿ ಆಹಾರಕ್ಕೂ ಪರದಾಡುವಂತಾಗಿತ್ತು. ಈ ಸಂಧರ್ಭದಲ್ಲಿ ತಾಲ್ಲೂಕಿನ ಹಲವು ಸಂಘಟನೆಗಳು, ವ್ಯಕ್ತಿಗಳು, ರಾಜಕೀಯ ನೇತಾರರು ತಮ್ಮ ತಮ್ಮ ಕೈಲಾದ ನೆರವು ನೀಡಿದ್ದರು. ಈಗ ಮತ್ತೆ ಕೋವಿಡ್-19 ಎರಡನೆಯ ಅಲೆಯ ಕಾರಣಕ್ಕೆ 14 ದಿನಗಳ ಕಾಲ ಜನತಾ ಕರ್ಫ್ಯೂ ಹೆಸರಿನಲ್ಲಿ ಮತ್ತೆ ಲಾಕ್ ಡೌನ್ ಜಾರಿಯಲ್ಲಿರುವ ಕಾರಣಕ್ಕೆ ತಾಲ್ಲೂಕಿನ ಬಡ ಕುಟುಂಬಗಳು ಆತಂಕದಲ್ಲಿವೆ. ಇವರೆಲ್ಲರ ಚಿತ್ತವೀಗ ಉಸ್ತುವಾರಿ ಸಚಿವರಾದ ಆನಂದ ಸಿಂಗ್ ರವರ ಮೇಲಿರುವುದರಿಂದ ಹಲವ ಉ ನಿರೀಕ್ಷೆಗಳು ಕೂಡ ಇಮ್ಮಡಿಗೊಂಡಿವೆ.