
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.28: ಹರಗಿನಡೋಣಿ ಗ್ರಾಮದ ನಾಗರೀಕ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಗ್ರಾಮದ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಗಳಿಗೆ ಮತ್ತು ಜಿಲ್ಲಾ ಪಂಚಾಯತ್ ಸಿ ಇ ಓ ಗೆ ಮನವಿ ಸಲ್ಲಿಸಲಾಯಿತು.
ಹರಗಿನಡೋಣಿ ಗ್ರಾಮದ ಜನತೆ ಒಂದೆಡೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಸೂಕ್ತ ರಸ್ತೆ ಸೌಲಭ್ಯಗಳಿಂದ ವಂಚಿತರಾಗಿ, ಇನ್ನೊಂದೆಡೆ ಊರಿನ ಸುತ್ತಲೂ ಹತ್ತಾರು ಮೆದು ಕಬ್ಬಿಣ ಕಾರ್ಖಾನೆಗಳು, ಎಲ್ಲಾ ಪರಿಸರ ಮಾಲಿನ್ಯ ನೀತಿ-ನಿಯಮಗಳನ್ನು ಗಾಳಿಗೆ ತೂರಿ, ಕಾರ್ಖಾನೆಗಳನ್ನು ನಡೆಸುತ್ತಿರುವುದರಿಂದ, ವಾಯುಮಾಲಿನ್ಯ ಮಿತಿಮೀರಿ, ಊರಿನ ಜನತೆ ಕ್ಯಾನ್ಸರ್ ಪಶ್ರ್ಚುವಾಯು ಹಾಗೂ ಇತರೆ ರೋಗಗಳಿಗೆ ನಿರಂತರವಾಗಿ ಬಲಿಯಾಗುತ್ತಿದ್ದಾರೆ.
ಈ ಸಮಸ್ಯೆಗಳ ಪರಿಹಾರಕ್ಕಾಗಿ ಈಗಾಗಲೇ ಕಳೆದ ಕೆಲವು ವರ್ಷಗಳಿಂದ, ಅನೇಕ ಬಾರಿ ಜಿಲ್ಲಾಡಳಿತಕ್ಕೆ, ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಜನತೆಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳದೇ ಅತ್ಯಂತ ನಿರ್ಲಕ್ಷ ಧೋರಣೆಯನ್ನು ವ್ಯಕ್ತಪಡಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಆದುದರಿಂದ ಹರಗಿನಡೋಣಿ ಗ್ರಾಮದ ನಾಗರಿಕ ಹಕ್ಕುಗಳ ಹೋರಾಟ ಸಮಿತಿಯು ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನತೆಯ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಆರ್.ಸೋಮಶೇಖರ್ ಗೌಡ, ಸಮಿತಿಯ ಸಂಚಾಲಕರಾದ ಈ ಯರ್ರಿಸ್ವಾಮಿ ರೈತ ಮುಖಂಡರಾದ ಗೋವಿಂದ್, ಗುರಳ್ಳಿ ರಾಜ, ಗ್ರಾಮಸ್ತರಾದ ಶಿವರಾಮ ರೆಡ್ಡಿ, ದೊಡ್ಡಬಸವನ ಗೌಡ, ಅಜಯ್ ಕುಮಾರ್, ಬಸವರಾಜ್, ಕೃಷ್ಣಾರೆಡ್ಡಿ, ಕಟ್ಟೇಗೌಡ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.