ಹರಗಿನಡೋಣಿ ಕುಡಿಯುವ ನೀರು ಯೋಜನೆ ಶೀಘ್ರ ಜಾರಿಗೆ ವೈ.ಎಂ. ಸತೀಶ್ ಆಗ್ರಹ


(ಸಂಜೆವಾಣಿ ವಾರ್ತೆ)
ಬೆಂಗಳೂರು, ಸೆ. 15: ಬಳ್ಳಾರಿ ತಾಲೂಕಿನ ಹರಗಿನಡೋಣಿ, ಜಾನೆಕುಂಟೆ ಮತ್ತು ಜಾನೆಕುಂಟೆ ತಾಂಡಕ್ಕೆ ಕುಡಿಯುವ ನೀರು ಯೋಜನೆಯ ಕುರಿತು ಜಲಸಂಪನ್ಮೂಲ ಇಲಾಖೆಯ 94ನೇ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಸರ್ಕಾರದ ತಾಂತ್ರಿಕ ಮತ್ತು ಆರ್ಥಿಕ ಅನುಮೋದನೆಯನ್ನು ಪಡೆಯಬೇಕಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
ಬಳ್ಳಾರಿ – ವಿಜಯನಗರ ಜಿಲ್ಲಾ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಸದನದಲ್ಲಿ  ಇಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈವರೆಗೂ ಈ ಯೋಜನೆ ಕೇವಲ ಬಜೆಟ್‍ನ ಘೋಷಣೆಯಾಗಿತ್ತು. ಈ ವಿಷಯವನ್ನು ವಿಶೇಷವಾಗಿ ಪರಿಗಣಿಸಿ, ಜಲಸಂಪನ್ಮೂಲ ಇಲಾಖೆಯ 94ನೇ ಸಭೆಯಲ್ಲಿ ಚರ್ಚೆ ನಡೆಯಿಸಲಾಗಿದೆ. ಈ ಯೋಜನೆಗೆ ಆರ್ಥಿಕ ಹಾಗೂ ತಾಂತ್ರಿಕ ಇಲಾಖೆಯ ಅನುಮೋದನೆಯನ್ನು ಪಡೆಯಬೇಕಿದೆ ಎಂದರು. 
ಆರಂಭದಲ್ಲಿ ಈ ಯೋಜನೆಯು 60 ಕೋಟಿ ರೂಪಾಯಿಯ ವೆಚ್ಚದಲ್ಲಿ ರೂಪುಗೊಂಡಿದ್ದು, ಬದಲಾದ ಸನ್ನಿವೇಶದಲ್ಲಿ 41.79 ಕೋಟಿ ರೂಪಾಯಿಗೆ ವಿನ್ಯಾಸಗೊಳಿಸಲಾಗಿದೆ.  ಆದ್ಯತೆಯ ಆಧಾರದ ಮೇಲೆ ಕುಡಿಯುವ ನೀರಿನ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.
ಬಳ್ಳಾರಿ ತಾಲೂಕಿನ ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆ ಮತ್ತು ಕಕ್ಕಬೇವಿನಹಳ್ಳಿ, ಅಸುಂಡಿ, ಲಿಂಗದೇನಹಳ್ಳಿ ಮತ್ತು ಸಿಂಧುವಾಳ ಗ್ರಾಮಗಳಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಸರ್ಕಾರ ಮತ್ತು ಸಚಿವರ ಮೇಲೆ ಒತ್ತಡ ಹೇರಿದರು.