ಹರಕೆಯಂತೆ ಆರ್‍ಸಿಬಿಗೆ ಗೆಲುವು: ದೇವರಿಗೆ ದಂಡ ನಮಸ್ಕಾರ ಹಾಕಿ ಕಾಯಿ ಒಡೆದ ಯುವಕ

ಕಲಬುರಗಿ:ಏ.29: ಐಪಿಎಲ್ ಪಂದ್ಯಾವಳಿಯ ತಂಡಗಳ ಪೈಕಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‍ಸಿಬಿ)ಗೆ ಇದ್ದಷ್ಟು ಅಭಿಮಾನಿಗಳು ಬಹುಶ: ಇನ್ನಾವುದೇ ತಂಡಕ್ಕಿಲ್ಲ ಎಂದೇ ಹೇಳಬಹುದು. ತಂಡ ಸೋತರೂ, ಗೆದ್ದರೂ ಅಭಿಮಾನಿಗಳು ಆರ್‍ಸಿಬಿಯನ್ನು ಯಾವತ್ತೂ ಬಿಟ್ಟುಕೊಟ್ಟಿಲ್ಲ. ಇಂತಹ ಅಭಿಮಾನಿಗಳ ಪೈಕಿ ಜಿಲ್ಲೆಯ ಆಳಂದ್ ತಾಲ್ಲೂಕಿನ ಖಜೂರಿ ಗ್ರಾಮದ ಆಕಾಶ್ ಕಟಕೆ ಕೂಡ ಒಬ್ಬ.
ಆಕಾಶ್ ಕಟಕೆಗೆ ಕ್ರಿಕೆಟ್ ಆಡಲು ಬರುವುದಿಲ್ಲ. ಒಂದು ಕ್ರಿಕೆಟ್ ಟೀಂನಲ್ಲಿ ಎಷ್ಟು ಜನ ಆಟಗಾರರು ಇರುತ್ತಾರೆ ಎನ್ನುವುದು ಕೂಡ ಆತನಿಗೆ ಗೊತ್ತಿಲ್ಲ. ಆದಾಗ್ಯೂ, ಆತ ಆರ್‍ಸಿಬಿ ತಂಡದ ದೊಡ್ಡ ಅಭಿಮಾನಿ. 21 ವಯಸ್ಸಿನ ಆಕಾಶ್ ಕಟಕೆ ಓದಿದ್ದು ಕೇವಲ ಐದನೇ ತರಗತಿ. ಸದ್ಯ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾನೆ.
ಮಂಗಳವಾರ ಜರುಗಿದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್‍ಸಿಬಿ ತಂಡಗಳ ನಡುವಿನ ಪಂದ್ಯ ರೋಚಕ ತಿರುವು ಪಡೆದಿತ್ತು. ಕೊನೆ ಘಳಿಗೆಯಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎನ್ನುವುದು ಕುತೂಹಲ ಮೂಡಿಸಿತ್ತು. ಈ ಪಂದ್ಯವನ್ನು ಗೆಳೆಯರ ಜೊತೆ ವೀಕ್ಷಣೆ ಮಾಡುತ್ತಿದ್ದ ಆಕಾಶ್‍ಗೆ ಎಲ್ಲರೂ ಆರ್‍ಸಿಬಿ ಸೋಲುತ್ತದೆ ಎಂದು ಮೂದಲಿಸಿದ್ದರಂತೆ. ಆ ವೇಳೆ ಗೆಳೆಯರ ಜೊತೆ ವಾದ ಮಾಡಿ ಆರ್‍ಸಿಬಿ ಗೆದ್ದರೆ ಖಜೂರಿಯ ಆರಾಧ್ಯದೈವ ಕೋರಣೇಶ್ವರ್ ದೇವರಿಗೆ ದಂಡ ನಮಸ್ಕಾರ ಹಾಕಿ, ತೆಂಗಿನ ಕಾಯಿ ಒಡೆಯುವುದಾಗಿ ಆಕಾಶ್ ಗೆಳೆಯರಿಗೆ ಸವಾಲು ಹಾಕಿದ್ದ. ಅದರಂತೆ ಪಂದ್ಯ ಅಂತ್ಯಗೊಂಡಾಗ ಆರ್‍ಸಿಬಿ ತಂಡ ರೋಚಕ ಒಂದು ರನ್‍ನಿಂದ ಗೆದ್ದಿತ್ತು.
ತನ್ನ ನೆಚ್ಚಿನ ತಂಡ ಗೆದ್ದಿದ್ದರಿಂದ ಫುಲ್ ಖುಷ್ ಆದ ಆಕಾಶ್, ಹರಕೆಯಂತೆ ಗೆಳೆಯರ ಜೊತೆ ದೇವಸ್ಥಾನಕ್ಕೆ ಹೋಗಿ ದಂಡ ನಮಸ್ಕಾರ ಹಾಕಿ ತೆಂಗಿನಕಾಯಿ ಒಡೆದಿದ್ದಾನೆ. ಅಲ್ಲದೇ ಈ ಬಾರಿ ಆರ್‍ಸಿಬಿ ತಂಡ ಕಪ್ ಗೆಲ್ಲಲಿ ಎಂದೂ ದೇವರಲ್ಲಿ ಮೊರೆ ಇಟ್ಟಿದ್ದಾನೆ. ಆಕಾಶನ ಕ್ರಿಕೆಟ್ ಅಭಿಮಾನಕ್ಕೆ ಗ್ರಾಮಸ್ಥರು ಭೇಷ್ ಎನ್ನುತ್ತಿದ್ದಾರೆ.