ಹಮಾಸ್ ಯುದ್ಧ ನೆತನ್ಯಾಹು-ಮೋದಿ ಚರ್ಚೆ

ನವದೆಹಲಿ, ಡಿ.೨೦-ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ದೂರವಾಣಿ ಕರೆ ಮೂಲಕ ಮಾತನಾಡಿದ್ದು,
ಯುದ್ಧದಲ್ಲಾಗುತ್ತಿರುವ ಇತ್ತೀಚಿನ ಬೆಳವಣಿಗೆಗೆಳ ಬಗ್ಗೆ ನೆತನ್ಯಾಹು ಅವರು ಮೋದಿ ಅವರಿಗೆ ವಿವರಿಸಿದ್ದಾರೆ.
ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ, ಕಡಲ ಸಂಚಾರದ ಸುರಕ್ಷತೆಯ ಬಗ್ಗೆ ಇರುವ ಕಳವಳ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.
ಯುದ್ಧ ಸಂತ್ರಸ್ತರಿಗಾಗಿ ನಿರಂತರ ಮಾನವೀಯ ನೆರವಿನೊಂದಿಗೆ, ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಯ ಪರವಾಗಿ ಭಾರತ ಸ್ಥಿರ ನಿಲುವನ್ನು ಹೊಂದಿದೆ ಎಂದು ನೆತನ್ಯಾಹು ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ.
ಒಂದು ವಾರದ ಹಿಂದೆ ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ಭಾರತವು ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಮತ ಚಲಾಯಿಸಿದ ಸಮಯದಲ್ಲಿ ಈ ಮಾತುಕತೆಗಳು ನಡೆದಿವೆ.