ಹಮಾಸ್ ಕಮಾಂಡರ್ ಹತ್ಯೆ: ಐಡಿಎಫ್

ಜೆರುಸಲೇಂ, ಅ.೧- ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ಹಮಾಸ್ ಭಯೋತ್ಪಾದಕರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಮಾಸ್ ಕಮಾಂಡರ್ ಇಬ್ರಾಹಿಂ ಬಿಯಾರಿಯನ್ನು ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್) ಹೊಡೆದುರುಳಿಸಿದೆ. ಬಿಯಾರಿಯನ್ನು ಗಾಜಾಪಟ್ಟಿಯಲ್ಲಿ ಅತೀ ದೊಡ್ಡ ನಿರಾಶ್ರಿತರ ಶಿಬಿರ ಜಬಲ್ಯಾ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಇಸ್ರೇಸ್ ರಕ್ಷಣಾ ಪಡೆ (ಐಡಿಎಫ್) ದೃಢಪಡಿಸಿವೆ. ಆದರೆ ಈ ಶಿಬಿರದಲ್ಲಿ ಬಿಯಾರಿ ಇದ್ದ ಎಂಬ ವರದಿಯನ್ನು ಹಮಾಸ್ ವಕ್ತಾರ ಹಝೀಮ್ ಕಾಸಿಂ ಅಲ್ಲಗಳೆದಿದ್ದಾನೆ.
ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ದಾಳಿ ನಡೆಸಲು ’ನುಕ್ಭಾ’ ಹೋರಾಟಗಾರರನ್ನು ಇಸ್ರೇಲ್ ಗೆ ಕಳುಹಿಸಿಕೊಡುವಲ್ಲಿ ಬಿಯಾರಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಐಡಿಎಫ್ ಹೇಳಿದೆ.ಇದಕ್ಕೂ ಮುನ್ನ ಐಡಿಎಫ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ರಿಚರ್ಡ್ ಹೆಟ್ಚ್ ಹೇಳಿಕೆ ನೀಡಿ, ಪರಿಹಾರ ಶಿಬಿರದ ಸುತ್ತಮುತ್ತ ಅತ್ಯಂತ ಹಿರಿಯ ಹಮಾಸ್ ಕಮಾಂಡರ್ ಅವರನ್ನು ಐಡಿಎಫ್ ಗುರಿ ಮಾಡಿದೆ ಎಂದು ಪ್ರಕಟಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಡಿಎಫ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಜೊನಾಥನ್ ಕಾನ್ರಿಕುಸ್, ಗಾಜಾ ಪಟ್ಟಿಯ ಈಶಾನ್ಯ ಭಾಗಗಳಿಂದ ಇಸ್ರೇಲ್ ವಿರುದ್ಧ ಅಕ್ಟೋಬರ್ ೭ ರ ದಾಳಿಯ ಯೋಜನೆ ಹಾಗೂ ಅನುಷ್ಟಾನದಲ್ಲಿ ಬಿಯಾರಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿಸಿದ್ದಾರೆ. ಆದರೆ ಇಸ್ರೇಲ್ ಹೇಳಿಕೆಯನ್ನು ಹಮಾಸ್ ನಿರಾಕರಿಸಿದೆ. ದಾಳಿಯ ವೇಳೆ ಬಿಯಾರಿ ಶಿಬಿರದಲ್ಲಿ ಇರಲಿಲ್ಲ. ಅಲ್ಲದೆ ಅಲ್ಲಿ ಕನಿಷ್ಠ ೫೦ ಪ್ಯಾಲೆಸ್ತೀನಿಯನ್ನರು ಕೊಲ್ಲಲ್ಪಟ್ಟರು ಎಂದು ಹಮಾಸ್ ನಿಯಂತ್ರಿತ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅದೂ ಅಲ್ಲದೆ ಮುಂದಿನ ದಿನಗಳಲ್ಲಿ ಕೆಲವು ವಿದೇಶಿ ಬಂಧಿತರನ್ನು ಬಿಡುಗಡೆ ಮಾಡಲಾಗುವುದು ಎಂದು ಹಮಾಸ್ ಸಂಧಾನಕಾರರಿಗೆ ತಿಳಿಸಿದೆ ಎನ್ನಲಾಗಿದೆ.