ಹಬ್ಬಗಳ ಮೌಲ್ಯಗಳನ್ನು ಅರಿತು ಆಚರಿಸಿದರೆ ಅರ್ಥಪೂರ್ಣ

ಕಲಬುರಗಿ: ಮಾ.9:ನಮ್ಮ ದೇಶದಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಪ್ರತಿಯೊಂದು ಆಚರಣೆಯ ಹಿನ್ನಲೆ ಮೌಲ್ಯ, ವೈಜ್ಞಾನಿಕತೆ ಅಡಗಿದೆ. ಅದನ್ನು ಅರಿತುಕೊಂಡು ಅದರ ಮೌಲ್ಯಗಳಿಗೆ ದಕ್ಕೆ ಬಾರದಂತೆ ಹಬ್ಬಗಳನ್ನು ಆಚರಿಸಿದರೆ ಅಂತಹ ಆಚರಣೆಗಳು ಅರ್ಥಪೂರ್ಣವೆನಿಸಲು ಸಾಧ್ಯವಿದೆ ಎಂದು ಮಹಾಗಾಂವ ಹೈನುಗಾರಿಕೆ ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮಲ್ಲಿನಾಥ ಹೇಮಡಿ ಮಾರ್ಮಿಕವಾಗಿ ಹೇಳಿದರು.
ನಗರದ ಆಳಂದ ರಸ್ತೆಯ ವಿಜಯನಗರ ಕಾಲನಿಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಮಂಗಳವಾರ ರಾತ್ರಿ ಜರುಗಿದ ಕಾಮ ದಹನ, ಆರೋಗ್ಯ ಅರಿವು, ವಿಶೇಷ ಉಪನ್ಯಾಸ, ಹಾಸ್ಯ ಸಂಜೆ, ಸಂಗೀತ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಮಾತನಾಡಿ, ಮನುಷ್ಯನಲ್ಲಿ ಅಡಗಿರುವ ಕಾಮ, ಕ್ರೋದ, ಮತ್ಸರ ಅಂತಹ ಅರಿಷಡ್ವರ್ಗಗಳು, ಕೆಟ್ಟ ಗುಣಗಳನ್ನು ನಾಶಪಡಿಸಿ, ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಪರಸ್ಪರ ಶಾಂತಿ, ಸೌಹಾರ್ದತೆಯ ಜೀವನ ಸಾಗಿಸಬೇಕೆಂಬ ಮೇರು ಸಂದೇಶವನ್ನು ಹೋಳಿ ಹಬ್ಬ ಹೊಂದಿದೆ. ದುಷ್ಟ ಶಕ್ತಿಗಳನ್ನು ನಾಶಪಡಿಸಿ, ಶಿಷ್ಟತೆಯನ್ನು ಕಾಪಾಡಿಕೊಂಡು ಹೋಗುವ, ಪರಸ್ಪರ ಪ್ರೀತಿ, ಶಾಂತಿ, ಸೌಹಾರ್ಧತೆ, ಸಹಬಾಳ್ವೆಯಿಂದ ಜೀವನ ಸಾಗಿಸಬೇಕೆಂಬ ಮೌಲ್ಯಗಳನ್ನು ಹೊಂದಿದೆ ಎಂದರು.
ಕÁರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಕಮಲಾಬಾಯಿ ಸಿ.ಸ್ವಾಮಿ, ಈಶ್ವರ ಚೌಡಾಪೂರ, ಮಲ್ಲಿಕಾರ್ಜುನ ಪಾಟೀಲ ಬಟ್ಟರಗಿ, ಶ್ರೀಕಾಂತ ಪಾಟೀಲ ದಿಕ್ಸಂಗಿ, ಶಿವಯೋಗಪ್ಪ ಬಿರಾದಾರ, ಈರಣ್ಣ ಹಳ್ಳದ, ವೀರೇಶ ಬೈರಾಮಡಗಿ, ಸಿದ್ದು ಪೊಲೀಸ್ ಪಾಟೀಲ, ಗುರು ಸ್ವಾಮಿ, ಶ್ರೀನಿವಾಸ ಚವ್ಹಾಣ, ಅರುಣಕುಮಾರ ಪಾಟೀಲ ಡಬರಾಬಾದ್, ಪ್ರೇಮ ರಾಠೋಡ, ಮಂಜುನಾಥ ಉಪ್ಪಾರ ಸೇರಿದಂತೆ ಬಡಾವಣೆಯ ನಾಗರಿಕರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.