
ಉಮಾಪತಿ ಶೆಟ್ಟರ್
ಹಗರಿಬೊಮ್ಮನಹಳ್ಳಿ. ಮಾ.15 ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಗರಿಗೆದರಿ ನಿಂತಿವೆ. ಚುನಾವಣೆ ಕಾವು ದಿನ ದಿನಕ್ಕೆ ಏರುತ್ತಿದೆ. ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರಣಾಳಿಕೆ ಮತ್ತು ಆಮೀಷಗಳನ್ನು ಒಡ್ಡುವ ಮೂಲಕ ಮತದಾರರನ್ನು ಸೆಳೆದುಕೊಳ್ಳುತ್ತಿದ್ದಾರೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಕಾಂಗ್ರೆಸ್ ಬಸ್ ಯಾತ್ರೆ, ಜೆಡಿಎಸ್ ಪಂಚರತ್ನ ಯಾತ್ರೆ ನಡೆಸಿದ್ದಾರೆ.
ಅಧಿಕಾರದಲ್ಲಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸರ್ಕಸ್ಸು ನಡೆಸಿದ್ದಾರೆ. ಪ್ರಧಾನಿಯಿಂದ ಹಿಡಿದು ಕೇಂದ್ರದ ನಾಯಕರು ರಾಜ್ಯಕ್ಕೆ ಪದೇ ಪದೇ ಭೇಟಿ ಕೊಡುತ್ತಿದ್ದಾರೆ. ಕಾರಣ ದಕ್ಷಿಣ ಭಾರತದಲ್ಲಿ ಕರ್ನಾಟಕ ಮಾತ್ರ ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದು. ಇದು ಕೈತಪ್ಪಿದರೆ ದಕ್ಷಿಣ ಭಾರತದಲ್ಲಿ ನೆಲೆಯೂರುವುದು ಕಷ್ಟ ಎಂದು ಅರಿತು ತಮ್ಮ ತಂತ್ರಗಾರಿಕೆಯಿಂದ ಈ ಬಾರಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೆ ತರಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಗೆಲ್ಲಬಾರದು ಎಂದು ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಮತದಾರರನ್ನು ಓಲೈಸಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಬಿಜೆಪಿ ಹಿಂದುತ್ವ ಅಜೆಂಡವನ್ನು ಅಸ್ತ್ರವಾಗಿ ಬಳಸದೆ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಮತದಾರರನ್ನು ಸೆಳೆಯಬೇಕಾಗಿದೆ. ಪಕ್ಷದಲ್ಲಿ ಈಗಾಗಲೇ ಕೆಲವರು ಭ್ರಷ್ಟಾಚಾರ ಮತ್ತು ವಿವಾದಾತ್ಮಕ ಹೇಳಿಕೆಯಿಂದ ಮುಜುಗರವಾಗವoತಹ ಘಟನೆಗಳು ಪಕ್ಷಕ್ಕೆ ಸ್ವಲ್ಪ ಹಿನ್ನಡೆ ತರಬಹುದು.
.ಹಬೋಹಳ್ಳಿ ಎಸ್ ಸಿ ಮೀಸಲು ವಿಧಾನಸಭಾ ಕ್ಷೇತ್ರದ ನಂತರ ಮೊದಲ ಬಾರಿ ಬಿಜೆಪಿ ಗೆದ್ದಿತ್ತು. ತದನಂತರ ಒಂದು ಬಾರಿ ಜೆಡಿಎಸ್ ಮತ್ತೊಮ್ಮೆ ಬಾರಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಭೀಮನಾಯ್ಕ್ ಮೂರನೇ ಬಾರಿ ಆಯ್ಕೆಯಾಗಲು ಸ್ಪರ್ಧೆ ಬಯಸಿದ್ದಾರೆ. ಎರಡು ಬಾರಿ ಸೋತಿರುವ ನೇಮಿರಾಜ್ ನಾಯ್ಕ್ ಮತ್ತೊಮ್ಮೆ ಸ್ಪರ್ಧೆಯ ಆಕಾಂಕ್ಷಿಯಾಗಿದ್ದಾರೆ.. ಇವರು ಎರಡು ಬಾರಿ ಕ್ಷೇತ್ರವನ್ನು ಹಿಡಿತ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಕೆಲವು ಮತದಾರರ ನಾಡಿ ಮಿಡಿತ ಅರ್ಥಮಾಡಿಕೊಳ್ಳದೆ ಕೈಚಲ್ಲಿ ಕೂತಿದ್ದಾರೆ.
ಎದುರಾಳಿಯ ವೀಕ್ನೆಸ್ ಅರಿತು ತನ್ನ ತಂತ್ರಗಾರಿಕೆಯಿಂದ ಎರಡು ಬಾರಿ ಸತತ ಶಾಸಕರಾಗಿ ಆಯ್ಕೆಯಾಗಿರುವ ಭೀಮಾನಾಯ್ಕ್ ಕ್ಷೇತ್ರದಲ್ಲಿ ಭದ್ರ ಬುನಾದಿ ಹಾಕುತ್ತಿರುವಾಗಲೇ ಹಲವಾರು ಮುಖಂಡರು ಕಾರ್ಯಕರ್ತರು ಶಾಸಕರ ವರ್ತನೆಗೆ ಬೇಸತ್ತು ಹೊರಬಂದು ಮುಂದಿನ ಚುನಾವಣೆಯಲ್ಲಿ ಹೇಗಾದರೂ ಮಾಡಿ ಸೋಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಇದು ಹಾಲಿ ಶಾಸಕರಿಗೆ ಸ್ವಲ್ಪ ಹಿನ್ನಡೆಯಾದರೂ ಆಗಬಹುದು. ಬಿಜೆಪಿಯಲ್ಲಿ ಈಗಾಗಲೇ ಹಲವಾರು ಆಕಾಂಕ್ಷಿಗಳು ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಪ್ರಬಲವಾಗಿ ನೇಮಿರಾಜ್ ನಾಯ್ಕ್, ಬಲ್ಲಾಹುಣಿಸಿ ರಾಮಣ್ಣ,ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎಂ ಲಕ್ಷ್ಮಿ ನಾರಾಯಣ ಹೆಸರು ಕೇಳಿ ಬರುತ್ತದೆ. ಇದಲ್ಲದೆ ಎಲ್.ಭೀಮ ನಾಯ್ಕ್ , ಜಯಪ್ರಕಾಶ್, ಕೃಷ್ಣ ನಾಯ್ಕ್, ಮಲ್ಲಿಕಾರ್ಜುನಾಯ್ಕ್ ಕೂಡ ಆಕಾಂಕ್ಷಿಯಾಗಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ಆದ್ದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ ಎರಡು ಬಾರಿ ಸೋಲು ಅನುಭವಿಸಿದ ಬಿಜೆಪಿಗೆ ಅನುಕಂಪದ ಅಲೆ ಎದ್ದು ಕಾಣುತ್ತದೆ. ಅಭ್ಯರ್ಥಿ ಯಾರಾಗುತ್ತಾರೆ ಎಂಬುದರ ಮೇಲೆ ಗೆಲುವು ನಿಶ್ಚಯವಾಗುತ್ತದೆ.
ಕ್ಷೇತ್ರದಲ್ಲಿ ಜಾತಿವಾರು ನೋಡಿದಾಗ ಅಧಿಕ ಮತದಾರರಿರುವ ಲಿಂಗಾಯಿತರು, ವಾಲ್ಮೀಕಿ, ದಲಿತ , ಕುರುಬ ಸಮುದಾಯದವರು ಯಾವ ಪಕ್ಷವನ್ನು ಬೆಂಬಲಿಸುತ್ತಾರೆ ಆ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಇನ್ನು ಮುಸ್ಲಿಂ, ಲಮಾಣಿ, ಜೈನರು ಬ್ರಾಹ್ಮಣರು ಉಳಿದ ಸಣ್ಣ ಪುಟ್ಟ ಸಮುದಾಯದವರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಲಿಂಗಾಯಿತ ವಾಲ್ಮೀಕಿ, ದಲಿತ ಸಮುದಾಯದ ಮತಗಳು ಶೇಕಡ 60ರಷ್ಟು ಬಿಜೆಪಿಗೆ ಬರಬಹುದು. ಇನ್ನುಳಿದ ಕುರುಬ ಮತ್ತು ಮುಸ್ಲಿಂ ಸಮುದಾಯದ ಮತಗಳು ಶೇಕಡ 60ರಷ್ಟು ಕಾಂಗ್ರೆಸ್ಸಿಗೆ ಹೋಗಬಹುದು. ಉಳಿದ ಸಣ್ಣಪುಟ್ಟ ಸಮುದಾಯದ ಮತಗಳು ಯಾವ ಕಡೆ ವಾಲುತ್ತದೆ ಎಂಬುದೇ ಕುತೂಹಲ.? ರಾಜ್ಯದಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ತರಲು ಕನಸು ಕಾಣುತ್ತಿರುವ ಬಿಜೆಪಿಗೆ ಮತದಾರರು ಕ್ಷೇತ್ರದಲ್ಲಿ ಯಾವ ಪಕ್ಷವನ್ನು ಆಯ್ಕೆ ಮಾಡುತ್ತಾರೆ ಎಂಬುವುದು ಕಾದು ನೋಡಬೇಕು?