ಹಬೋಹಳ್ಳಿ:ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಹಹರಿಬೋಮ್ಮನಹಳ್ಳಿ:ಜೂ.24 ತಾಲೂಕಿನ ಹಂಪಸಾಗರ 2 ಗ್ರಾಮದ ಸೇವಲಾಲ್ ವಿದ್ಯಾಸಂಸ್ಥೆಯಲ್ಲಿ ತಾಲೂಕು ಕ.ಸಾ.ಪ ವತಿಯಿಂದ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಸಂಸ್ಥಾಪಕರಾದ ಹೆಚ್.ನಾಣೀಕಿನಾಯ್ಕ್ ಮಾತನಾಡಿ ಕ.ಸಾ.ಪ.ದಿಂದ ಶಾಲಾ ಕಾಲೇಜುಗಳಲ್ಲಿ ನಡೆಯುವ ಇಂಥ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವಲ್ಲಿ ಹಾಗೂ ನಾಡಿನ ಹಿರಿಯ ಸಾಹಿತಿಗಳ ಪಸ್ತಕಗಳನ್ನು ಓದುವುದರ ಜೊತೆಗೆ ತಾವು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು.
 ದತ್ತಿ ಉಪನ್ಯಾಸಕರಾದ ಹುರಕಡ್ಲಿ ಶಿವಕುಮಾರ ಶರಣ ಸಾಹಿತ್ಯ, ಜನಪದ ಸಾಹಿತ್ಯ ಮತ್ತು ಗಾಂಧಿವಾದ ಕುರಿತು ಮಾತನಾಡಿದರು. ಶರಣ ಸಾಹಿತ್ಯ ಮತ್ತು ಜನಪದ ಸಾಹಿತ್ಯ ನಮ್ಮ ಜಿವನದ ಮೌಲ್ಯಗಳನ್ನು ಕಟ್ಟಿಕೊಳ್ಳುವಲ್ಲಿ ಮತ್ತು ಗಟ್ಟಿಗೊಳಿಸುವಲ್ಲಿ ತುಂಬಾ ಸಹಕಾರಿಯಾಗಿವೆ ಎಂದರು. ಬಸವಾದಿಶರಣರ ವಚನಗಳನ್ನು ಹಾಗೂ ಜನಪದ ಸಾಹಿತ್ಯದ ವಿವಿಧ ಪ್ರಕಾರಗಳನ್ನು ತಿಳಿಸುತ್ತಾ ನಮ್ಮ ಹಿರಿಯರು ಸುಂದರ ಜೀವನ ಮತ್ತು ಸಹಬಾಳ್ವೆಯನ್ನು ನಡೆಸುವಲ್ಲಿ ಇವುಗಳ ಕೊಡುಗೆ ಅವಿಸ್ಮರಣೀಯವೆಂದರು.    
 ಉಪನ್ಯಾಸಕರಾದ ಗಣೇಶರಾವ್ ಗ್ರಂಥಾಲಯ ಮತ್ತು ಪುಸ್ತಕ ಸಂಸ್ಕೃತಿ ಕುರಿತು ಮಾತನಾಡಿದರು ಪುಸ್ತಕಗಳು ಮಸ್ತಕ ಸೇರಿದರೆ ಜೀವನದ ಗತಿಯೇ ಬದಲಾಗುತ್ತದೆ. ಜ್ಞಾನವೇ ಶಕ್ತಿ ಎಂಬ ದಾರ್ಶನಿಕರ ವ್ಯಾಕ್ಯನವನ್ನು ನೆನೆದು ಜ್ಞಾನವು ವ್ಯಕ್ತಿಯನ್ನು ದೈರ್ಯವಂತನಾಗಿ, ಪ್ರಜ್ಞಾವಂತನಾಗಿ ಸಮಾಜದ ಹಿತ ಚಿಂತಕನಾಗಿ ಬೆಳೆಸುತ್ತದೆ. ಪುಸ್ತಕಗಳನ್ನು ಆಸ್ತಿಯನ್ನಾಗಿ ಹೊಂದಿ ಸಾಧನೆಯ ಶಿಖರವೇರಿದ ಮಹನೀಯರನ್ನು ನೆನೆಯುತ್ತಾ ವಿದ್ಯಾರ್ಥಿಗಳಲ್ಲಿ ಪುಸ್ತಕ ಪ್ರೀತಿ ಮೂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕ.ಸಾ.ಪ. ಅಧ್ಯಕ್ಷ ಗೂಳಪ್ಪ ಹುಲಿಮನಿ ಮಾತನಾಡಿ ವಿದ್ಯಾರ್ಥಿಗಳು ಭವ್ಯ ಭಾರತದ ಬೆಳಕಿನ ಕಿರಣಗಳು ತಮ್ಮ ಭವಿಷ್ಯ ಉಜ್ವಲಗೊಳ್ಳಲೆಂದು ಇಂಥ ಶರಣರ ,ದಾರ್ಶನಿಕರ ಸಾಧಕರ ಜೀವನಾದರ್ಶಗಳನ್ನು ತಮಗೆ ತಿಳಿಸುವಲ್ಲಿ ಕ.ಸಾ.ಪ. ಸದಾ ಸಿದ್ದವಿರುತ್ತದೆಂದರು. ಗ್ರಂಥಾಲಯಗಳು ಜ್ಞಾನ ಭಂಡಾರದ ಬೀಗದ ಕೈಗಳಿದ್ದಂತೆ ಅವುಗಳನ್ನು ತೆರೆದು  ಪ್ರವೇಶಿಸಿದಾಗಲೇ ಜ್ಞಾನದ ಬೆಳಕು ಬಾಳಿನ ದೀವಿಗೆಯಾಗುತ್ತದೆಂದರು.
ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಷ.ಬ್ರ.ಅಭಿನವ ಶಿವಲಿಂಗರುದ್ರಮುನಿ ಶಿವಾಚಾರ್ಯರು ತಮ್ಮ ಆಶೀರ್ವಚನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹ.ಬೊ.ಹಳ್ಳಿ ತಾಲೂಕಿನ ಕಟ್ಟಕಡೆಯ ಗ್ರಾಮವಾದ ಹಂಪಸಾಗರ -2ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡದ್ದು ಶ್ಲಾಘನೀಯವೆಂದರು. ಕನ್ನಡ ತಾಯಿ ಭಾಷೆ ಇದರ ಮೂಲಕ ಇತರೆ ಎಲ್ಲಾ ಭಾಷೆಗಳನ್ನು ಕಲಿಯಬಹುದು. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಹವ್ಯಾಸಗಳನ್ನು ಹೊಂದಬೇಕು.ಮಂತ್ರಾಲಯದ ಬದಲು ಗ್ರಂಥಾಲಯಕ್ಕೆ, ಹಿಮಾಲಯದ ಬದಲು ವಿದ್ಯಾಲಯಕ್ಕೆ ಹೋಗಬೇಕೆಂದು ಹೇಳುವುದರ ಮೂಲಕ ಶಿಕ್ಷಣದ ಮಹತ್ವ ಸಾರಿದರು. ಕಾರ್ಯಕ್ರಮದಲ್ಲಿ ತಾಲೂಕು ಗೌರವ ಕಾರ್ಯದರ್ಶಿ ಬಿ,ಮಾರುತಿ ಹಂಪಸಾಗರ ಹೋಬಳಿ ಅಧ್ಯಕ್ಷ ಎಲ್.ಬಸವರಾಜಪ್ಪ ಪ್ರಾಂಶುಪಾಲರಾದ ಎಂ.ಕೆ.ಪಾಟೀಲ್, ಬಸವನಗೌಡ ಪಾಟೀಲ್, ಕೆ.ಮಲ್ಲಪ್ಪ ಹಾಗೂ ಪಿ.ಯು.ಸಿ.ಮತ್ತು 10ನೇ ತರಗತಿ ವಿದ್ಯಾರ್ಥಿಗಳಿದ್ದರು,ಹೆಚ್.ಶಿವಪುತ್ರಪ್ಪ ಗಣೇಶಗೌಡ ಕಾರ್ಯಕ್ರಮ ನಿರ್ವಹಿಸಿದರೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.