ಹಬೋಹಳ್ಳಿ:ಕಲ್ಬುರ್ಗಿ ಜೆಸ್ಕಾಂ ಎಂ.ಡಿ.ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಆ.02 ಕಲಬುರಗಿ ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಪಾಂಡ್ವೆ ರಾಹುಲ್ ತುಕಾರಾಂ ತಮ್ಮ ಸರ್ವಾಧಿಕಾರಿ ಧೋರಣೆಯಿಂದ ಗುತ್ತಿಗೆದಾರರಿಗೆ ಸಂಕಷ್ಟ ತಂದೊಡ್ಡಿದ್ದಾರೆ ಎಂದು ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಘವೇಂದ್ರ ತಳವಾರ್ ಹೇಳಿದರು.
ಪಟ್ಟಣದ ಜೆಸ್ಕಾಂ ಕಛೇರಿ ಬಳಿ ಸೋಮವಾರ ಸಂಘದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ಜುಲೈ 24 ರಂದು ರಾಜ್ಯಾಧ್ಯಕ್ಷರನ್ನು ಒಳಗೊಂಡು 7 ಜಿಲ್ಲೆಗಳ ಪ್ರತಿನಿಧಿಗಳು ಹಾಗೂ ಸರ್ವ ಗುತ್ತಿಗೆದಾರರು ವ್ಯವಸ್ಥಾಪಕ ನಿರ್ದೇಶಕರು ಜೆಸ್ಕಾಂ ಇವರಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಹೋರಾಟ ಮಾಡಿ ಮನವಿ ಸಲ್ಲಿಸಿದ್ದೆವು. ಆ ಮನವಿಗೆ ಸ್ಪಂದಿಸಿ ತಾವು ಇಲ್ಲದೇ ಇರುವ ಸಂದರ್ಭದಲ್ಲಿ ಹೋರಾಟಕ್ಕೆ ಬಂದಿದ್ದ ಗುತ್ತಿಗೆದಾರರ ಜನಸ್ತೋಮವನ್ನು ಕಂಡು ತಮ್ಮ ಇಲಾಖೆಯ ಡಿ.ಟಿ.ರವರಿಗೆ ಮೌಖಿಕ ಆದೇಶವನ್ನು  ಮಾಡಿ ಗುತ್ತಿಗೆದಾರರ ಪ್ರಸ್ತುತ ಬೇಡಿಕೆಗಳಿಗೆ ಸ್ಪಂದಿಸಿ ನನ್ನ ಪರವಾಗಿ ನೀವು ಲಿಖಿತ ಆದೇಶಗಳನ್ನು ನೀಡಿ ಎಂದು ಹೇಳಿದ್ದೀರೆಂದು ಡಿ.ಟಿ.ರವರು ಹೋರಾಟ ಮಾಡುವ ಸ್ಥಳಗಳಿಗೆ ಬಂದು ನಮ್ಮ ಮನವಿ ಸ್ವೀಕರಿಸಿ ಆದಷ್ಟು ಬೇಗನೆ ಈ ಬೇಡಿಕೆಗಳನ್ನು ಈಡೇರಿಸುತ್ತವೆ ಎಂದು ಲಿಖಿತ ರೂಪದ ಭರವಸೆ ನೀಡಿದ್ದರು.
ಆದರೆ ಮರುದಿನವೇ ವ್ಯವಸ್ಥಾಪಕ ನಿರ್ದೇಶಕರ ಡಿ.ಟಿ.ರವರ ಸಮ್ಮತಿ ಸೂಚಿಸಿ ಗುತ್ತಿಗೆದಾರರಿಗೆ ನೀಡಿರುವ ಆದೇಶಗಳನ್ನು ಜುಲೈ 25 ರಂದು ರದ್ದುಗೊಳಿಸಿ ಆದೇಶ ಹೊರಡಿಸಿರುತ್ತಾರೆ. ಆದ್ದರಿಂದ ರಾಜ್ಯಾಧ್ಯಂತ ಗುತ್ತಿಗೆದಾರರ ಸಂಘವು ಇವರ ಈ ಹಿಟ್ಲರ್ ಧೋರಣೆಯನ್ನು ಖಂಡತುಂಡವಾಗಿ ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಆಗಷ್ಟ 1 ರಿಂದ ಅನಿರ್ಧಿಷ್ಟ ಅವಧಿ ಹೋರಾಟ ಮಾಡಲು ನಮ್ಮ ರಾಜ್ಯಾಧ್ಯಕ್ಷರ ಮೇರೆಗೆ ಈ ತಾಲೂಕು ಗುತ್ತಿಗೆದಾರರ ಸಂಘ ನಿಶ್ಚಯಿಸಿದೆ ಎಂದರು.
ಹಿರಿಯ ವಿದ್ಯುತ್ ಗುತ್ತಿಗೆದಾರ ಎನ್.ಎಂ.ಗೌಸ್ ಮಾತನಾಡಿ ಹ.ಬೊ.ಹಳ್ಳಿ ವಿಭಾಗದಲ್ಲಿ ಬರುವ, ಉಪವಿಭಾಗಗಳಲ್ಲಿ ಯಾವುದೇ ತರಹದ ಇಲಾಖೆಗೆ ಸಂಬಂಧಪಟ್ಟ ಲೇಬರ್ ಅವಾರ್ಡ್‍ನ ಕಾಮಗಾರಿಗಳನ್ನು ಆಗಷ್ಟ 1 ರಿಂದ ಅನಿರ್ಧಿಷ್ಟ ಅವಧಿವರೆಗೆ ನಾವು ಸ್ಥಗಿತಗೊಳಿಸುತ್ತಿದ್ದೇವೆ. ಹಾಗಾಗಿ ತಮ್ಮ ಇಲಾಖೆಯಿಂದ ನಮ್ಮ ಗುತ್ತಿಗೆದಾರರಿಗೆ ಯಾವುದೇ ತರಹದ ಒತ್ತಡವನ್ನು ನೀವು ಹಾಕುವಂತಿಲ್ಲ. ಗುಲ್ಬರ್ಗ ಜೆಸ್ಕಾಂನ ಎಂ.ಡಿ. ಪಾಂಡ್ವೆ ರಾಹುಲ್ ತುಕಾರಾಂ ತಮ್ಮ ಸರ್ವಾಧಿಕಾರಿ ಧೋರಣೆಯಿಂದ ಈಗಾಗಲೇ ಎಲ್ಲರಿಗೂ ರೋಸಿಹೋಗಿದ್ದಾರೆ. ಈ ಕೂಡಲೇ ಇವರನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಅದೇ ರೀತಿ ಗುಲ್ಬರ್ಗಕ್ಕೆ ಆಗಷ್ಟ 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿದ್ದು ಆ ದಿನ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಅವರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯನಿರ್ವಾಹಕ ಅಭಿಯಂತರರಾದ ಶೇಖರ ಬಹುರೂಪಿ ಮನವಿ ಸ್ವೀರಿಸಿ ಮಾತನಾಡಿ ಗುತ್ತಿಗೆದಾರರ ಈ ಮನವಿಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿದ್ಯುತ್ ಗುತ್ತಿಗೆದಾರರಾದ ಬಿ.ಶಂಕರ್, ವಿಜಯಕುಮಾರ, ಪೂರ್ಯಾನಾಯ್ಕ, ಬಿ.ಎಂ.ಎಸ್. ಮಂಜುನಾಥ, ಡಿ.ರಮೇಶ್, ಸಿ.ವಾಗೀಶ್, ಅಶೋಕ, ಕೊಟ್ರೇಶ್, ಎಂ, ಗುರುಬಸವರಾಜ, ಲೋಕೆಶ, ಕೃಷ್ಣ, ವೀರೇಶ್, ತಿಮ್ಮಣ್ಣ, ದಾದು, ವೈ.ಕೊಟ್ರೇಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಮಲ್ಲೇಶ್‍ನಾಯ್ಕ ಉಪಸ್ಥಿತರಿದ್ದರು.