ಹನ್ಸಾ-ಎನ್‌ಜಿ ವಿಮಾನ ಅನಾವರಣ

ಬೆಂಗಳೂರು, ಏ.೧- ನಾಗರಿಕ ವಿಮಾನಗಳ ಪೈಲಟ್‌ಗಳಿಗೆ ಚಾಲನಾ ತರಬೇತಿಗೆ ಅನುಕೂಲವಾಗುವಂತೆ ಹೊಸ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ೨ ಆಸನಗಳುಳ್ಳ ‘ಹನ್ಸಾ-ಎನ್‌ಜಿ’ ವಿಮಾನ ಬೆಂಗಳೂರಿನ ಸಿಎಸ್‌ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್‌ಎಎಲ್) ಸಂಸ್ಥೆಯ ಅನಾವರಣಗೊಳಿಸಿದೆ
ಈ ವಿಮಾನದಲ್ಲಿ ಮಾರುಕಟ್ಟೆಯ ಸಮಕಾಲೀನ ಬೇಡಿಕೆಗಳಿಗೆ ತಕ್ಕಂತೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ವಿಮಾನಕ್ಕೆ ’‘ಹನ್ಸಾ-ನ್ಯೂ ಜನರೇಷನ್’ (ಎನ್‌ಜಿ) ಹೆಸರಿಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಿಎಸ್‌ಐಆರ್-ಎನ್‌ಎಎಲ್ ನಿರ್ದೇಶಕ ಜಿತೇಂದ್ರ ಜೆ.ಜಾಧವ್, ೨೦೧೬ರಿಂದ ಭಾರತವು ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿ ಬೆಳೆದಿದೆ. ಇದರಿಂದ ತರಬೇತಿ ಪಡೆದ ಪೈಲಟ್‌ಗಳಿಗೆ ದೇಶದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅನೇಕ ಫ್ಲೈಯಿಂಗ್ ಕ್ಲಬ್‌ಗಳು ಕಡಿಮೆ ವೆಚ್ಚದ ತರಬೇತುದಾರ ವಿಮಾನಗಳನ್ನು ಹುಡುಕುತ್ತಿವೆ. ಇದನ್ನು ಮನಗಂಡ ಸಂಸ್ಥೆಯು ತರಬೇತುದಾರ ವಿಮಾನದ ಬೇಡಿಕೆ ಪೂರೈಸಲು ಹನ್ಸಾ ವಿಮಾನದ ಮಾರ್ಪಾಡಿಗೆ ಮುಂದಾಯಿತು’ ಎಂದು ತಿಳಿಸಿದರು.
ಈ ಸ್ವದೇಶಿ ತರಬೇತಿ ವಿಮಾನ ತಯಾರಿ ಯೋಜನೆಗೆ ಸರ್ಕಾರ ೨೦೧೮ರಲ್ಲಿ ಮಂಜೂರಾತಿ ನೀಡಿತ್ತು. ಗ್ಲಾಸ್ ಕಾಕ್‌ಪಿಟ್ ಒಳಗೊಂಡ ರೆಟ್ರೊ ಶೈಲಿಯ ಹನ್ಸಾ-೩ ಹೆಸರಿನ ವಿಮಾನವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಪ್ರಮಾಣೀಕರಿಸಿದೆ. ಇದನ್ನು ೨೦೧೯ರ ಏರೋ-ಇಂಡಿಯಾದಲ್ಲಿ ಪ್ರದರ್ಶಿಸಲಾಯಿತು ಎಂದು ಮಾಹಿತಿ ನೀಡಿದರು.