ಹನೂರು ಪಪಂ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಮೈತ್ರಿಯ ಮೂಲಕ ಅಧಿಕಾರದ ಗದ್ದುಗೆ

ಹನೂರು, ನ.8: ಭಾರಿ ಕುತೂಹಲ, ದಾಖಲೆ, ಹಾಗೂ ಪ್ರತಿಷ್ಠೆ ಎನಿಸಿಕೊಂಡಿದ್ದ ಹನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಯ ಮೂಲಕ ಅಧಿಕಾರದ ಗದ್ದುಗೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿವೆ.
ಕ್ಷೇತ್ರದ ರಾಜಕಾರಣದ ಇತಿಹಾಸದಲ್ಲಿ ಮೊದಲ ಭಾರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಯಾಗಿ ಪ.ಪಂ.ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ವಶಪಡಿಸಿಕೊಳ್ಳುವ ಮೂಲಕ 6 ಸ್ಥಾನಗಳನ್ನು ಗಳಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬೇಕೆಂದುಕೊಂಡಿದ್ದ ಜೆಡಿಎಸ್ ಪಕ್ಷವನ್ನು ಸರಿಗಟ್ಟಿವೆ.
ಅಧ್ಯಕ್ಷರಾಗಿ ಸಾಮಾನ್ಯ ಮಹಿಳೆ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದ 12 ನೇ ವಾರ್ಡ್‍ನ ಬಿಜೆಪಿ ಸದಸ್ಯೆ ಚಂದ್ರಮ್ಮ ಹಾಗೂ ಉಪಾಧ್ಯಕ್ಷರಾಗಿ ಹಿಂದುಳಿದ ವರ್ಗ `ಬಿ’ ಸ್ಥಾನಕ್ಕೆ 3ನೇ ವಾರ್ಡ್‍ನ ಕಾಂಗ್ರೇಸ್ ಸದಸ್ಯ ಹರೀಶ್‍ಕುಮಾರ್ ಆಯ್ಕೆಯಾಗಿದ್ದಾರೆ.
ಶನಿವಾರ ಬೆಳಿಗ್ಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿ ಮಧ್ಯಾಹ್ನ 1.30 ರ ವೇಳೆಗೆ ಕೈ ಮೇಲೆತ್ತುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು.
ಕಾಂಗ್ರೇಸ್‍ನ 4 ಸದಸ್ಯರು, ಬಿಜೆಪಿಯ 2 ಸದಸ್ಯರುಗಳು ಹಾಗೂ ಸಂಸದ ವಿ.ಶ್ರೀನಿವಾಸ ಪ್ರಸಾದ್ ಮತ್ತು ಶಾಸಕ ಆರ್.ನರೇಂದ್ರ ತಲಾ ಒಂದೊಂದು ಮತಗಳಂತೆ ಒಟ್ಟು 8 ಮತಗಳು ಬಿಜೆಪಿ ಹಾಗೂ ಕಾಂಗ್ರೇಸ್‍ನ ಅಧ್ಯಕ್ಷರು ಉಪಾಧ್ಯಕ್ಷರುಗಳಿಗೆ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದ ಹಿನ್ನಲೆಯಲ್ಲಿ ಚುನಾವಣೆಯನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಪರಿಗಣಿಸಲಾಯಿತು.
ಜೆಡಿಎಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮುಮ್‍ತಾಜ್ ಭಾನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆನಂದ್‍ಕುಮಾರ್ ನಾಮ ಪತ್ರ ಸಲ್ಲಿಸಿದ್ದು, 6 ಮತಗಳನ್ನು ಪಡೆದು ಪರಾಜಯಗೊಂಡರು.
ಚುನಾವಣೆಯನ್ನು ತಹಶೀಲ್ದಾರ್ ನಾಗರಾಜು ನೇತೃತ್ವದಲ್ಲಿ ನಡೆಸಲಾಯಿತು.
ಭಾರಿ ಪೊಲೀಸ್ ಬಂದುಬಸ್ತ್:ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದ ಅಧ್ಯಕ್ಷರು, ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಹಿತಕರ ಘಟನೆಗಳು ಜರುಗದಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ನಾಗರಾಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದುಬಸ್ತ್‍ನ್ನು ಕೈಗೊಳ್ಳಲಾಗಿತ್ತು. ಹೆಚ್ಚುವರಿಯಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರು ಸೇರಿದಂತೆ ರಾಮಾಪುರ, ಹನೂರು ಪೊಲೀಸರನ್ನು ನಿಯೋಜಿಸಲಾಗಿತ್ತು.
ಜೆಡಿಎಸ್ ಗೆ ಭಾರಿ ನಿರಾಸೆ:ಪ.ಪಂ. 13 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ 6 ಸ್ಥಾನಗಳನ್ನು ಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಕಾಂಗ್ರೇಸ್ 4, ಬಿಜೆಪಿ 3 ಸ್ಥಾನಗಳನ್ನಷ್ಟೆ ಗಳಿಸಲು ಸಾಧ್ಯವಾಗಿತ್ತು. ಈ ಪೈಕಿ ಬಿಜೆಪಿಯ 2ನೇ ವಾರ್ಡ್‍ನ ನಾಗರಾಜು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ 12 ಸದಸ್ಯರ ಬಲಬಲವಿದ್ದ ಪ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ. ಇಂತಹ ಅತಂತ್ರ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ದೂರುವಿಡುವ ಉದ್ದೇಶದಿಂದ ಕಾಂಗ್ರೇಸ್ ಮತ್ತು ಬಿಜೆಪಿ ಮೈತ್ರಿಯಾಗುವ ಮೂಲಕ ದೊಡ್ಡ ಪಕ್ಷ ಎನಿಸಿಕೊಂಡಿದ್ದ ಜೆಡಿಎಸ್‍ಗೆ ಭಾರಿ ನಿರಾಸೆನ್ನು ಮೂಡಿಸಿವೆ.
ಚುನಾವಣೆ ಪೂರ್ಣಗೊಂಡ ಬಳಿಕ ಸುದ್ದಿಗಾರರೊಡನೆ ಸಂಸದ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಪ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಹುಮತವಿಲ್ಲದ ಕಾರಣ ಪ್ರಸ್ತುತ ಸ್ಥಳಿಯ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೇಸ್ ಬೆಂಬಲ ಪಡೆದು ಅಧಿಕಾರವನ್ನು ಹಿಡಿಯಲಾಗಿದೆ. ಪ.ಪಂ.ಜನತೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದನ್ನು ಈಡೇರಿಸಬೇಕಾದದ್ದು, ನಮ್ಮ ಕರ್ತವ್ಯ. ಪ.ಪಂ.ಅಭಿವೃದ್ಧಿಗೆ ನಾನು ಕೂಡ ಸಹಕಾರ ನೀಡುತ್ತೇನೆ. ಅಪವಿತ್ರ ಮೈತ್ರಿ ಎನ್ನುವುದು ಅವರವರ ವಿವೇಚನೆಗೆ ಬಿಟ್ಟದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಆರ್.ನರೇಂದ್ರ, ನಿರಂಜನ್‍ಕುಮಾರ್ ಇನ್ನಿತರರು ಇದ್ದರು.