ಹನುಮಾನ್ ಪ್ರತಿಮೆ ಬಳಿ ಬಿಕಿನಿ ಪೋಸ್ ವಿವಾದಕ್ಕೆಡೆ

ಭೂಪಾಲ್, ಮಾ.೭-ಮಧ್ಯಪ್ರದೇಶದ ರತ್ಲಮ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ೧೩ನೇ ಮಿಸ್ಟರ್ ಜ್ಯೂನಿಯರ್ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ (ದೇಹದಾರ್ಢ್ಯ ಸ್ಪರ್ಧೆ) ಮಹಿಳೆಯರು ಬಿಕಿನಿ ಧರಿಸಿ, ಹನುಮಾನ್ ಪ್ರತಿಮೆ ಎದುರು ಪೋಸ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ರತ್ಲಮ್ ಜಿಲ್ಲೆಯಲ್ಲಿ, ಬಿಜೆಪಿ ಪಕ್ಷದ ಮೇಯರ್ ಪ್ರಹ್ಲಾದ್ ಪಟೇಲ್ ಅವರು ಮಾರ್ಚ್ ೪ ಮತ್ತು ೫ರಂದು ಈ ಸ್ಪರ್ಧೆ ಆಯೋಜಿಸಿದ್ದರು. ಅಲ್ಲದೆ, ಬಿಜೆಪಿ ಶಾಸಕ ಚೈತನ್ಯ ಕಶ್ಯಪ್ ಸಹಯೋಗ ಇತ್ತು.

ದೇಹದಾರ್ಢ್ಯ ವೇದಿಕೆ ಮೇಲೆ ದೊಡ್ಡದಾದ ಆಂಜನೇಯನ ಮೂರ್ತಿ ಇಡಲಾಗಿತ್ತು. ಮಹಿಳಾ ಸ್ಪರ್ಧಿಗಳು ಬಿಕಿನಿ ತೊಟ್ಟು, ತಮ್ಮ ದೇಹವನ್ನು ಪ್ರದರ್ಶಿಸಿದರು. ಅದರ ಬೆನ್ನಲ್ಲೇ ವಿವಾದ ಎದ್ದಿದ್ದು, ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ, ಸ್ಪರ್ಧೆ ನಡೆದ ಜಾಗದಲ್ಲಿ ಸೋಮವಾರ ಗಂಗಾಜಲ ಸಿಂಪಡಿಸಿ ಪವಿತ್ರಗೊಳಿಸಿದ್ದಾರೆ. ಅಲ್ಲದೆ, ಅಲ್ಲೇ ಕುಳಿತು ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಇದು ಅಸಭ್ಯತೆ ಎಂದು ಆರೋಪಿಸಿದ್ದಾರೆ.
ಇಂಥವರಿಗೆ ಆಂಜನೇಯನೇ ಶಿಕ್ಷೆ ಕೊಡುತ್ತಾನೆ ಎಂದು ಯುತ್ ಕಾಂಗ್ರೆಸ್ ಅಧ್ಯಕ್ಷ ಮಯಾಂಕ್ ಜಾತ್ ಹೇಳಿದ್ದಾರೆ.

ಇನ್ನೂ, ಮುಖ್ಯಮಂತ್ರಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಬರೀ ಕಾಂಗ್ರೆಸ್ ಮಾತ್ರವಲ್ಲ, ಕೆಲವು ಹಿಂದು ಸಂಘಟನೆಗಳೂ ಕೂಡ ಯುವತಿಯರು ಬಿಕಿನಿಯಲ್ಲಿ ಹನುಮಾನ್ ದೇವರ ಪ್ರತಿಮೆ ಎದುರು ಪೋಸ್? ಕೊಟ್ಟಿದ್ದನ್ನು ವಿರೋಧಿಸಿವೆ.

ಈ ಸ್ಪರ್ಧೆ ಬಗ್ಗೆ ಬಿಜೆಪಿ ಸಮರ್ಥನೆ ಮಾಡಿಕೊಂಡಿದ್ದು, ಮಹಿಳೆಯರು ಕುಸ್ತಿ, ಜಿಮ್ನಾಸ್ಟಿಕ್ಸ್, ಸ್ವಿಮ್ಮಿಂಗ್ ಸೇರಿ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು, ಮಿಂಚುವುದನ್ನು ನೋಡಲು ಕಾಂಗ್ರೆಸ್‌ಗೆ ಸಾಧ್ಯವೇ ಇಲ್ಲ. ಹಾಗೆ ನೋಡಿದಾಕ್ಷಣೆ ಅವರಲ್ಲಿರುವ ರಾಕ್ಷಸತ್ವ ಹೊರಗೆ ಬರುತ್ತದೆ ಎಂದಿದೆ.