ಹನುಮನಹಳ್ಳಿ ದುರುಗಪ್ಪ “ವಿಜಯನಗರದ ಕೋಗಿಲೆ”


ಸಂಜೆವಾಣಿ ವಾರ್ತೆ
ಹೊಸಪೇಟೆ : ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ  ಸಪ್ತಸ್ವರ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆಯ ಸೀಸನ್‌–3 ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಹನುಮನಹಳ್ಳಿಯ ದುರುಗಪ್ಪ ಅವರು ‘ವಿಜಯನಗರ ಕೋಗಿಲೆ’ ಕಿರೀಟ ಗೆದ್ದುಕೊಂಡಿದ್ದಾರೆ.
ಹೊಸಪೇಟೆಯ ಮಲ್ಲಿಕಾ ಹಿರೇಮಠ–ದ್ವಿತೀಯ, ಕಾಕುಬಾಳದ ರವಿ ಹಡಪದ– ತೃತೀಯ ಹಾಗೂ ಮಂಗಳೂರಿನ ಅಭಿಜ್ಞಾ ಅವರಿಗೆ ನಾಲ್ಕನೇ ಬಹುಮಾನ ಲಭಿಸಿತು. ಪ್ರಥಮ ಬಹುಮಾನಕ್ಕೆ 15 ಸಾವಿರ, ದ್ವಿತೀಯ 10 ಸಾವಿರ ಹಾಗೂ ತೃತೀಯ 5 ಸಾವಿರ ನಗದು ನೀಡಿ ಗೌರವಿಸಲಾಯಿತು.
57 ಮಂದಿ ಭಾಗಿ: ರಾಜ್ಯಮಟ್ಟದ ಮೂರನೇ ವರ್ಷದ ಗಾಯನ ಸ್ಪರ್ಧೆ ಇದಾಗಿತ್ತು. ರಾಜ್ಯದೆಲ್ಲೆಡೆಯಿಂದ 57 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಮೂರು ಸುತ್ತಿನ ಬಳಿಕ ಸೆಮಿಫೈನಲ್‌ಗೆ 12 ಮಂದಿ ಆಯ್ಕೆಯಾಗಿದ್ದರು. ಭಾನುವಾರ ಸೆಮಿಫೈನಲ್ ಮತ್ತು ಫೈನಲ್‌ ಸ್ಪರ್ಧೆಗಳು ನಡೆದವು. ಅಂತಿಮವಾಗಿ ಕಣದಲ್ಲಿದ್ದ 9 ಮಂದಿಯ ಜಿದ್ದಾಜಿದ್ದಿನ ಪೈಪೋಟಿಯ ಬಳಿಕ ಹಳ್ಳಿ ಪ್ರತಿಭೆ, ನರ್ಸರಿಯಲ್ಲಿ ಕೆಲಸ ಮಾಡುವ ದುರುಗಪ್ಪ ಅವರಿಗೆ ಪ್ರಶಸ್ತಿ ಒಲಿಯಿತು. ಮಲ್ಲಿಕಾ ಅವರು ಮುನಿರಾಬಾದ್‌ನಲ್ಲಿ ಕೆಪಿಟಿಸಿಎಲ್‌ ಎಂಜಿನಿಯರ್ ಆಗಿದ್ದರೆ, ರವಿ ಹಡಪದ ಅವರು ಲೈನ್‌ಮನ್‌ ಆಗಿದ್ದಾರೆ. ಅಭಿಜ್ಞಾ ಅವರು ಎಂಬಿಎ ವಿದ್ಯಾರ್ಥಿನಿ.
ಸುವರ್ಣ ಕರ್ನಾಟಕ ರಾಜ್ಯೋತ್ಸವ ಮತ್ತು ಪುನೀತ್‌ ರಾಜ್‌ಕುಮಾರ್ ಅವರ ಸ್ಮರಣಾರ್ಥ ಈ ಕಾರ್ಯಕ್ರಮ ನಡೆಯಿತು. ಯೋಗಾಚಾರ್ಯ ಭವರ್‌ಲಾಲ್‌ ಆರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೈದ್ಯೆ ರಾಧಾ ಗುರುಬಸವರಾಜ್‌ ಕಾರ್ಯಕ್ರಮ ಉದ್ಘಾಟಿಸಿದರು. ರವೀಂದ್ರ ಅಂಬಣ್ಣ ದೇವಗಿರಿಕರ್‌, ಸಮಾಜ ಸೇವಕ ಹೊನ್ನೂವರಲಿ ಸ್ವಾಮಿ ಸಹಿತ ಹಲವು ಗಣ್ಯರು ಇದ್ದರು.
ಸಪ್ತಸ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಗೀತ ಗಾಯನ ಹಾಗೂ ಶಾಲಿನಿ ಹೆಬ್ಬಾರ್ ನೇತೃತ್ವದ ನಾಟ್ಯನಾದ ಕಲಾ ಕೇಂದ್ರದವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ರೂವಾರಿ ಸಂತೋಷ್‌ ಎ.ಚಿತ್ರಗಾರ್ ಹಾಗೂ ಗಾಯಕ ಅಶೋಕ ಟಿ.ಚಿತ್ರಗಾರ್ ಕಾರ್ಯಕ್ರಮ ಸಂಘಟಿಸಿದರು.  ಲತಾ ಮೋಹನ್‌, ಕರಣಂ ವಾಸುದೇವ ಭಟ್‌, ಸ್ಯಾಮ್ಸನ್ ಮತ್ತು ಪುಷ್ಪಲತಾ ಹಿಟ್ನಾಳ್ ತೀರ್ಪುಗಾರರಾಗಿದ್ದರು. ಶ್ರಾವಣಿ ಕಟಗಿ ನಿರೂಪಿಸಿದರು.