ಹನಿ ಹನಿ ನೀರನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ

ಕೆ.ಆರ್.ಪೇಟೆ:ಮಾ:31: ಪ್ರತಿ ಹನಿಹನಿ ನೀರು ಜೀವಜಲವಾಗಿದ್ದು ಅಂತಹ ನೀರನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಾದದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕಿರಿಯ ಶ್ರೇಣಿಯ ನ್ಯಾಯಾಧೀಶರಾದ ಬಸವರಾಜ ತೊಳಸಪ್ಪ ನಾಯಕ ಕರೆ ನೀಡಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ತಾಲೂಕು ವಕೀಲರ ಸಂಘದ ವತಿಯಿಂದ ವಿಶ್ವ ಜಲ ದಿನಾಚರಣೆಯ ಅಂಗವಾಗಿ ಸಸಿಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನೀರು ಸಕಲ ಜೀವರಾಶಿಗಳಿಗೆ ಆಧಾರವಾಗಿದ್ದು ಭೂಮಿಯ ಮೇಲೆ ಲಭ್ಯವಿರುವ ನೀರಿನ ಮೂಲಗಳನ್ನು ಸಂರಕ್ಷಿಸಬೇಕು.
ನೀರನ್ನು ವೃಥಾ ಪೋಲು ಮಾಡಬಾರದು, ಆಧುನಿಕ ಕೃಷಿ ಪದ್ದತಿಗಳ ಮೂಲಕ ಕಡಿಮೆ ಪ್ರಮಾಣದ ನೀರನ್ನು ಬಳಸಿ ಅಧಿಕ ಇಳುವರಿ ಪಡೆಯುವ ಮೂಲಕ ನೀರಿನ ಮಿತಬಳಕೆ ಮಾಡಬೇಕು. ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿದ್ದು ಮುಂದಿನ ಹತ್ತಾರು ವರ್ಷಗಳಲ್ಲಿ ನೀರಿಗೆ ಅಭಾವವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಭೂಮಿಯ ಮೇಲೆ ಮರಳು ಗಣಿಗಾರಿಕೆ, ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಮೂಲಕ ನೀರಿನ ಲಭ್ಯತೆಯನ್ನು ಕಾಪಾಡಿಕೊಳ್ಳಬೇಕು, ಆ ಮೂಲಕ ಪ್ರತಿ ಹನಿ ನೀರನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಮುಂದಿನ ತಲೆಮಾರಿನ ಜನರಿಗೂ ಅದನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾ ಧೀಶ ಸಮೀರ್ ನಂದ್ಯಾಲ್ ವೃತ್ತನಿರೀಕ್ಷಕ ಎಂ.ಕೆ.ದೀಪಕ್, ಪುರಸಭಾ ಮುಖ್ಯಾಧಿಕಾರಿ ಸತೀಶ್‍ಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ಉಪಾಧ್ಯಕ್ಷ ಇಂದ್ರಕುಮಾರ್ ಮಾಜಿ ಅಧ್ಯಕ್ಷ ಎಂ.ಎಲ್.ಸುರೇಶ್, ಪ್ರಧಾನ ಕಾರ್ಯದರ್ಶಿ ಮೋಹನ್‍ಕುಮಾರ್, ಖಜಾಂಚಿ ಬಿ.ಕೆ.ಯೋಗೇಶ್, ಸಹಕಾರ್ಯದರ್ಶಿ ಅನ್ವೇಶ್, ಎಪಿಪಿ ಬಿ.ಸಿ.ರಾಜೇಶ್, ಹಿರಿಯ ವಕೀಲರಾದ ಎಚ್.ಎಂ.ರವಿ, ಮಾಜಿ ಕಾರ್ಯದರ್ಶಿ ಕೆ.ಎನ್.ಪಾಂಡು, ಎಂ.ಎಸ್. ಜಗದೀಶ್, ಉದ್ಯಮಿ ಕೆ.ಎಸ್.ರಾಜೇಶ್, ಸೇರಿದಂತೆ ನೌಕರವರ್ಗ ಹಾಜರಿದ್ದರು.