ಹನಿನೀರಾವರಿ ಪದ್ಧತಿಯಿಂದ ರೈತರು ಹೆಚ್ಚಿನ ಇಳುವರಿ ಪಡೆಯಬಹುದು

ಸಂಜೆವಾಣಿ ನ್ಯೂಸ್
ಮೈಸೂರು: ಮಾ.13:- ತುಂತುರು ನೀರಾವರಿ ಬದಲಾಗಿ ಹನಿನೀರಾವರಿ ಪದ್ಧತಿಯಲ್ಲಿ ರೈತರು ಶುಂಠಿ ಬೆಳೆದರೆ, ಉತ್ತಮ ಇಳುವರಿ ಜೊತೆಗೆ ನೀರಿನ ಉಳಿತಾಯ ಮಾಡಿ ರೋಗ ಮತ್ತು ಕೀಟಗಳ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ಜೈನ್ ಇರಿಗೇಷನ್ ಸಂಸ್ಥೆಯ ನೀರಾವರಿ ತಜ್ಞರಾದ ನಿರಂಜನ್ ಅವರು ತಿಳಿಸಿದರು.
ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಹನಿ- ತುಂತುರು ನೀರಾವರಿ ಹಾಗೂ ರಸಾವರಿ ಪದ್ಧತಿಗಳ ಅಳವಡಿಕೆ? ಕುರಿತು ಹುಣಸೂರು ತಾಲ್ಲೂಕಿನ ಕರುಣಕುಪ್ಪೆ ಗ್ರಾಮದ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರೈತ ಅಥವಾ ರೈತಮಹಿಳೆಯರ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಾಳೆ, ತೆಂಗು ಮತ್ತು ಇತರೆ ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿ ಹಾಗೂ ರಸಾವರಿ ಪದ್ಧತಿಗಳ ಅಳವಡಿಕೆ, ನಿರ್ವಹಣೆ, ಎಚ್ಚರಿಕೆ, ಸಮಸ್ಯೆ ಮತ್ತು ಪರಿಹಾರಗಳ ಕುರಿತು ಮಾಹಿತಿ ಹಂಚಿಕೊoಡರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ.ಜಿ.ಹೆಚ್.ಯೋಗೇಶ್ ಅವರು ಮಾತನಾಡಿ, ಮಣ್ಣಿನಲ್ಲಿ ಸಾವಯವ ಇಂಗಾಲ ಅಂಶವನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಾಧ್ಯ ಎಂದು ತಿಳಿಸಿದರು. ಮಣ್ಣಿನ ಜೀವಂತಿಕೆಯನ್ನು ನಿರ್ಧರಿಸುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಮತ್ತು ಅವುಗಳ ಚಟುವಟಿಕೆಯನ್ನು ಹೆಚ್ಚಿಸಲು ಮಣ್ಣಿಗೆ ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರ, ಕೃಷಿತ್ಯಾಜ್ಯ ಮತ್ತು ಸಂಪದ್ಭರಿತ ತಿಪ್ಪೆಗೊಬ್ಬರಗಳನ್ನು ಬಿತ್ತನೆ ಅಥವಾ ನಾಟಿಗೆ ಮುನ್ನ ಮಣ್ಣಿಗೆ ಸೇರಿಸಲು ರೈತರು ಮುಂದಾಗಬೇಕು ಎಂದರು.
ಇಲವಾಲ ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಪ್ಪ ಅವರು ಮಾತನಾಡಿ, ಶುಂಠಿಯಲ್ಲಿ ವೈಜ್ಞಾನಿಕ ಬೇಸಾಯ ಕ್ರಮಗಳಾದ ಉತ್ತಮ ಬೀಜಗಳ ಆಯ್ಕೆ, ಬೀಜೋಪಚಾರ, ಸಮಗ್ರ ಪೆÇೀಷಕಾಂಶಗಳ ನಿರ್ವಹಣೆ, ಲಘು ಪೆÇೀಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳ ನಿಯಂತ್ರಣ ಕುರಿತಂತೆ ವೈಜ್ಞಾನಿಕ ಮಾಹಿತಿ ನೀಡಿ, ಸ್ಥಳೀಯ ಸಮಸ್ಯೆಗಳ ಕುರಿತು ರೈತರೊಂದಿಗೆ ಚರ್ಚಿಸಿ ಪರಿಹಾರ ಕ್ರಮಗಳನ್ನು ತಿಳಿಸಿದರು.
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ಸಹಾಯಕ ತೋಟಗಾರಿಕಾ ಅಧಿಕಾರಿ ಕು.ಚೈತ್ರಾ ರವರು ಮಾತನಾಡಿ, ತಂಬಾಕು ಬೆಳೆಗೆ ಪರ್ಯಾಯ ಬೆಳೆಯಾಗಿ ತೆಂಗು, ಅಡಿಕೆ, ಬಾಳೆ ಮತ್ತು ಹಣ್ಣಿನ ಗಿಡಗಳನ್ನು ಬೆಳೆಯಬಹುದಾಗಿದೆ ಎಂದು ತಿಳಿಸಿ, ತೋಟಗಾರಿಕಾ ಇಲಾಖಾ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಹನಗೋಡು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾದ ವಿನಯ್ ಕುಮಾರ್ ಮಾತನಾಡಿ, ಕೃಷಿ ಇಲಾಖೆಯ ಸವಲತ್ತುಗಳನ್ನು ಪಡೆಯಲು ಇರುವ ಅವಕಾಶಗಳು ಮತ್ತು ರೈತರು ಅನುಸರಿಸಬೇಕಾದ ಕ್ರಮಗಳು ಮತ್ತು ಪಿಎಂ ಕಿಸಾನ್ ಇಕೆವೈಸಿ, ಬೆಳೆ ಸಮೀಕ್ಷೆ ಕುರಿತು ಮಾಹಿತಿ ನೀಡಿದರು.
ತರಬೇತಿಯಲ್ಲಿ ಕೃಷಿ ಅಧಿಕಾರಿ ಮಾಲತಿ, ಕರಣಕುಪ್ಪೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹರೀಶ್ ಮಾವೂರು, ಗ್ರಾಮ ಪಂಚಾಯಿತಿ ಸದಸ್ಯರುಗಳು ಸೇರಿದಂತೆ 50 ರೈತರು ಅಥವಾ ರೈತಮಹಿಳೆಯರು ಭಾಗವಹಿಸಿದ್ದರು.