ಹನಿಟ್ರ್ಯಾಪ್ ಖತರ್ನಾಕ್ ಗ್ಯಾಂಗ್ ಸೆರೆ


ಬೆಂಗಳೂರು,ಅ.೨೮-ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡುತಿದ್ದ ಖತರ್ನಾಕ್ ಗ್ಯಾಂಗ್ ನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.ಮಹದೇವಪುರದ ಅಂಜಲಿ, ದೀಪಕ್, ಪ್ರೇಮನಾಥ್, ಟೈಸನ್, ವಿನೋದ್, ಪ್ರಕಾಶ್, ಈಶ್ವರಿ ಬಂಧಿತ ಗ್ಯಾಂಗ್ ನ ಏಳು ಮಂದಿ ಆರೋಪಿಗಳಾಗಿದ್ದಾರೆ. ಬಂಧಿತ ಗ್ಯಾಂಗ್ ಪೈ ಲೇಔಟ್‌ನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮಾಡಿಕೊಂಡಿದ್ದು ಅಲ್ಲಿಗೆ ಶ್ರೀಮಂತ ವ್ಯಕ್ತಿಗಳನ್ನು ಕರೆಸಿ ಹನಿಟ್ರ್ಯಾಪ್ ಮಾಡ್ತಿದ್ದರು.
ಶ್ರೀಮಂತರ ವ್ಯಕ್ತಿಯ ಜತೆ ಯುವತಿ ಇರುವಾಗ ಯುವತಿ ಪತಿ ಹಾಗೂ ಸ್ನೇಹಿತರಂತೆ ಮನೆಗೆ ನುಗ್ಗಿ ಹೈಡ್ರಾಮ ಮಾಡಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಅದನ್ನಿಟ್ಟುಕೊಂಡು ಬೆದರಿಕೆ ಹಾಕುತಿದ್ದರು. ವಿಷಯ ಹೊರಗೆ ಬಾಯ್ಬಿಟ್ಟರೆ, ವಿಡಿಯೋ ಬಿಡುಗಡೆ ಮಾಡಲಾಗುವುದು ಇಲ್ಲವೇ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಮಾರಕಾಸ್ತ್ರಗಳ ಮೂಲಕ ಹಲ್ಲೆ ನಡೆಸಿ ಚಿನ್ನಾಭರಣ, ಹಣ ಕಸಿದುಕೊಳ್ಳುತ್ತಿದ್ದರು.
ಗ್ಯಾಂಗ್ ನಿಂದ ವಂಚನೆ ಗೊಳಗಾದ ವ್ಯಕ್ತಿಯೊಬ್ಬರು ನೀಡಿದ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಮಹದೇವಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.


ದ್ವಿಚಕ್ರ ವಾಹನ ಕಳವು ಮೂವರು ಸೆರೆ
ಬೆಂಗಳೂರು,ಅ.೨೮- ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಮಹಾಲಕ್ಷ್ಮೀಲೇಔಟ್ ಪೊಲೀಸರು ೧೦ ಲಕ್ಷ ರೂ. ಮೌಲ್ಯದ ೧೯ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಣಿಗಲ್ ಮೂಲದ ಕಮಲಾ ನಗರ ಮಾರ್ಕೆಟ್ ನಲ್ಲಿ ವಾಸಿಸುತ್ತಿದ್ದ ವಿಜಯ ಅಲಿಯಾಸ್ ಬೊಂಡಿ(೨೨), ತಮಿಳುನಾಡಿನ ಚಂಗಲ್ ಪಟ್ಟ್ ಮೂಲದ ಲಗ್ಗೆರೆಯ ಕಾರ್ತಿಕ್ (೧೯), ಸೇಲಂ ಮೂಲದ ಕಾಮಾಕ್ಷಿಪಾಳ್ಯ ವೃಷಭಾವತಿ ನಗರದ ಗಣೇಶ್ ಅಲಿಯಾಸ್ ಚಾರ್ಲಿ (೨೪) ಬಂಧಿತ ಆರೋಪಿಗಳಾಗಿದ್ದಾರೆ.
ಮಹಾಲಕ್ಷ್ಮೀಲೇಔಟ್ ನಿವಾಸಿ ಶ್ರೀಕಾಂತ ಅಯ್ಯರ್ ವೆಂಕಟೇಶ ಅವರು ಕಳೆದ ಸೆ. ೨೫ರಂದು ಬೆಳಿಗ್ಗೆ ತಮ್ಮ ಮನೆಯ ಮುಂಭಾಗದಲ್ಲಿ ಬೀಗ ಹಾಕಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು ೧೦ ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಗಳ ಒಟ್ಟು ೧೯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಆರೋಪಿಗಳ ಬಂಧನದಿಂದ ಮಹಾಲಕ್ಷ್ಮೀಲೇಔಟ್, ನಂದಿನಿಲೇಔಟ್, ಕೆಂಗೇರಿ, ಹಾಗೂ ಹೆಬ್ಬಗೋಡಿ ತಲಾ ೧ ರಾಜಗೋಪಾಲನಗರ ೨ ಸೇರಿ೧೯ ದ್ವಿಚಕ್ರ ವಾಹನಗಳಲ್ಲಿ ೬ ಪ್ರಕರಣಗಳು ಪತ್ತೆಯಾಗಿದ್ದು, ಉಳಿದ ೧೩ ದ್ವಿಚಕ್ರ ವಾಹನಗಳ ವಾರಸುದಾರರನ್ನು ಪತ್ತೆ ನಡೆಸಲಾಗುತ್ತಿದೆ.
ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಇನ್ಸ್ ಪೆಕ್ಟರ್ ಕಾಂತರಾಜು ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.