ಹನಿಟ್ರ್ಯಾಪ್‌ಗೆ ಬಳಕೆ ಸಿಡಿ ಯುವತಿ ಉಲ್ಟಾ

ಬೆಂಗಳೂರು, ಏ. ೧೨- ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪತ್ರಕರ್ತರಾದ ನರೇಶ್ ಗೌಡ ಹಾಗೂ ಶ್ರವಣ್‌ರವರು ನನ್ನನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತ ಯುವತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ರಾಸಲೀಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಈ ಹಿಂದೆ ನ್ಯಾಯಾಧೀಶರ ಮುಂದೆ ಹಾಜರಾಗಿ ಸಿಆರ್‌ಪಿಸಿ ೧೬೧ರ ಅಡಿಯಲ್ಲಿ ಹೇಳಿಕೆ ನೀಡಿ ತಮಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡರು ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿದ್ದರು.
ಇದಾದ ಕೆಲವೇ ದಿನಗಳಲ್ಲಿ ಯುವತಿ ಉಲ್ಟಾ ಹೊಡೆದಿದ್ದಾರೆ. ತಾವು ಒತ್ತಡಕ್ಕೆ ಸಿಲುಕಿದ್ದರಿಂದ ಈ ರೀತಿ ಹೇಳಿಕೆ ನೀಡಿದ್ದಾಗಿ ತಿಳಿಸಿದ್ದಾರೆ. ಈ ಪ್ರಕರಣದ ಕಿಂಗ್ ಪಿನ್‌ಗಳು ಎನ್ನಲಾದ ನರೇಶ್ ಗೌಡ ಹಾಗೂ ಶ್ರವಣ್ ತಮ್ಮನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದಾರೆ ಎಂದು ಎಸ್‌ಐಟಿ ಮುಂದೆ ಯುವತಿ ಹೇಳಿಕೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ತಾವು ನೀಡಿರುವ ಹೇಳಿಕೆ ಎಲ್ಲವೂ ಪೂರ್ಣ ಸತ್ಯವಲ್ಲ ಎಂದು ಅವರು ಎಸ್‌ಐಟಿ ಮುಂದೆ ಹೇಳಿರುವುದು ನಾನಾ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಸಿಆರ್‌ಪಿಸಿ ೧೬೧ರ ಅಡಿಯಲ್ಲಿ ಸಂತ್ರಸ್ತ ಯುವತಿ ನೀಡಿದ ಹೇಳಿಕೆ ಕೇಳಿ ಎಸ್‌ಐಟಿ ಅಧಿಕಾರಿಗಳಿಗೆ ದಿಗ್ಬ್ರಮೆಗೊಂಡಿದ್ದರು. ಆದರೆ ಈಗ ಯುವತಿ ಉಲ್ಟಾ ಹೊಡೆದಿದ್ದು, ಯುವತಿ ನೀಡಿರುವ ಹೇಳಿಕೆಯನ್ನು ಎಸ್‌ಐಟಿ ವಿಡೀಯೋ ರೆಕಾರ್ಡ್ ಮೂಲಕ ದಾಖಲು ಮಾಡಿಕೊಂಡಿದ್ದಾರೆ.
ಬಳಿಕ ಯುವತಿಯನ್ನು ಮತ್ತೊಮ್ಮೆ ನ್ಯಾಯಾಧೀಶರ ಎದುರು ಸಿಆರ್‌ಪಿಸಿ ೧೬೪ರ ಅಡಿಯಲ್ಲಿ ಹೇಳಿಕೆ ದಾಖಲಿಸಲು ಎಸ್‌ಐಟಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಿದ ನಂತರ ಎಸ್‌ಐಟಿ ಅಧಿಕಾರಿ ಕವಿತಾ ಆಕೆಯನ್ನು ವಿಚಾರಣೆಗೆ ಗುರಿಪಡಿಸಿ, ಮಾಹಿತಿಗಳನ್ನು ಸಂಗ್ರಹಿಸಿದ್ದರು. ಆದರೆ ಈಗ ಯುವತಿ ರಾಗ ಬದಲಿಸಿದ್ದು, ಇಡೀ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.