ಹದೆಗೆಟ್ಟು ಹಾಳಾದ ರಸ್ತೆಗಳು: ಇನ್ನೆಷ್ಟು ಬೇಕು ಜನರ ಜೀವ ಬಲಿ

ಎ.ಬಿ ಪಟೇಲ ಸೊನ್ನ

ಅಫಜಲಪುರ: ಸೆ.3:ತಾಲೂಕಿನಲ್ಲಿರುವ ಗ್ರಾಮೀಣ ಮತ್ತು ಜಿಲ್ಲಾ ರಸ್ತೆಗಳು ಸೇರಿದಂತೆ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರು ಸಾಕಷ್ಟು ಜನ ತಮ್ಮ ಜೀವ ಕಳೆದುಕೊಳ್ಳಲು ಹದೆಗೆಟ್ಟ ರಸ್ತೆಗಳೇ ಸಾಕ್ಷಿಯಾಗಿವೆ.

ತಾಲೂಕಿನ ಹೊಸೂರ,ಮಣ್ಣೂರ, ಕರಜಗಿ, ಅಫಜಲಪುರ, ಕಲಬುರಗಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ರಸ್ತೆಗಳು ಸಂಪೂರ್ಣ ಹಾಳಾಗಿ ಸಂಚಾರಕ್ಕೆ ಬಾರದಂತಾದರೂ ಜನನಾಯಕರೆಂದೆ ಕರೆಯಲ್ಪಡುವ ಶಾಸಕ ಎಂ.ವೈ.ಪಾಟೀಲ ,ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಕ್ಯಾರೇ ಎನ್ನುತ್ತಿಲ್ಲ.

ಪ್ರತಿದಿನ ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದು ಹೊರಟರೂ ಈ ರಸ್ತೆಗಳು ಜೀವ ಬಲಿ ಪಡೆಯುತ್ತಿರುವುದು ತಪ್ಪುತ್ತಿಲ್ಲ.

ಕಳೇದ ಮೂರ್ನಾಲ್ಕು ವರ್ಷಗಳಿಂದ ರಸ್ತೆಗಳಲ್ಲಿ ಸಾಕಷ್ಟು ವಾಹನಗಳ ಅಪಘಾತಗಳು ಸಂಭವಿಸಿ, ಅತ್ಯಮೂಲ್ಯ ಜೀವಗಳು ಬಲಿಯಾದವು. ಕೆಲವು ಜನ ಕೈಕಾಲು ಮುರಿದುಕೊಂಡರು. ಇಂದು ಕೂಡಾ ಅಫಘಾತಗಳು ದಿನನಿತ್ಯ ನಡೆಯುತ್ತಿವೆ. ಕಳೆದ ಎರಡು ದಿನಗಳ ಹಿಂದೆ ಶೇಷಗಿರಿಯ ಗ್ರಾ.ಪಂ ಸದಸ್ಯ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅಪಘಾತಕ್ಕೀಡಾಗಿ ಜೀವ ಕಳೆದುಕೊಂಡ ಆತ ಬದುಕಿ ಬರಲೆಂದು ಸಾವಿರಾರು ಜನ ದೇವರಿಗೆ ಹರಕೆ ಹೊತ್ತು ದೀರ್ಘ ದಂಡ ನಮಸ್ಕಾರ ಹಾಕಿದರೂ ಅದು ಫಲ ಕೊಡಲಿಲ್ಲ. ಆದರೆ ಈ ಹದೆಗೆಟ್ಟ ರಸ್ತೆಗಳನ್ನು ರಿಪೇರಿ ಮಾಡುವಂತೆ ಸರಕಾರದ ವಿರುದ್ಧ ಈ ಜನ ಧ್ವನಿ ಎತ್ತಲಿಲ್ಲ ಎನ್ನುವುದು ವಿಪರ್ಯಾಸ ಸಂಗತಿಯಾಗಿದೆ.

ಇಷ್ಟೊಂದು ರಸ್ತೆಗಳು ಹದೆಗೆಟ್ಟು ಸಂಚಾರಕ್ಕೆ ಬಾರದಂತಾದರೂ ಲೋಕೋಪಯೋಗಿ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ರಸ್ತೆಗಳ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಅಪಘಾತ ವಲಯಗಳನ್ನು ಗುರುತಿಸಿ, ರೋಡ ಬ್ರೇಕಗಳು ಹಾಕಿಲ್ಲ. ರಸ್ತೆಗಳಲ್ಲಿ ಬಿದ್ದ ಗುಂಡಿಗಳಿಗೆ ತಾತ್ಪೂರ್ತಿಕವಾಗಿ ರಿಪೇರಿ ಮಾಡುತ್ತಿಲ್ಲ. ಒಂದೇ ದಿನ ಕೂಡಾ ಈ ರಸ್ತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿಲ್ಲ. ಕೇವಲ ತಮ್ಮ ಪಸೆರ್ಂಟೇಜ್ ಪಡೆದುಕೊಂಡು ಕಲಬುರಗಿ ನಗರದಲ್ಲಿ ಆರಾಮವಾಗಿದ್ದುಕೊಂಡಿದ್ದಾರೆ. ರಸ್ತೆ ಕಾಮಗಾರಿ ಟೆಂಡರ ಪಡೆಯುವಾಗ ಗುತ್ತಿಗೆದಾರರು ಮೂರು ವರ್ಷಗಳ ಕಾಲ ಮೆಂಟೆನೆನ್ಸ್ ಮಾಡಬೇಕೆಂಬ ಷರತ್ತಿನೊಂದಿಗೆ ಕಾಮಗಾರಿ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಗುತ್ತಿಗೆದಾರರು ರಸ್ತೆ ಮೆಂಟೆನೆನ್ಸ್ ಏಕೆ? ಮಾಡುತ್ತಿಲ್ಲ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಈ ಭಾಗದ ಲೋಕಸಭಾ ಸದಸ್ಯರಾದ ಉಮೇಶ ಜಾಧವ ಅವರು ಈ ಕ್ಷೇತ್ರದಲ್ಲಿರುವ ರಸ್ತೆಗಳ ಕಡೆ ಒಂದೆ ಒಂದು ದಿನ ಹೊರಳಿ ನೋಡಿಲ್ಲ. ಜಿಲ್ಲೆಯಲ್ಲಿಯೇ ಈ ಕ್ಷೇತ್ರದ ಜನ ಹೆಚ್ಚಿನ ಮತಗಳು ನೀಡಿ ಗೆಲ್ಲಿಸಿ ಕಳುಹಿಸಿದರೂ ಈ ಭಾಗದ ಅಭಿವೃದ್ಧಿಗಾಗಿ ಕಿಂಚಿತ್ತು ಅನುದಾನ ಬಿಡುಗಡೆ ಮಾಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.

ಏನು ಮಾಡುದ್ರಿ ನಮ್ಮ ಜನ ಭಾಳ ದಡ್ಢ ಅದ್ಹಾರ. ಚುನಾವಣೆ ಬಂದಾಗ ಮಾತ್ರ ಜಾತಿ, ಹಣ, ಹೆಂಡ ಆಸೆಕ ಬಿದ್ದು, ಓಟ ಹಾಕ್ತಾರ. ಅಭಿವೃದ್ಧಿ ಮಾಡೋರಿಗಿ ಓಟ ಹಾಕಲ್ಲ. ಒಡೆದಾಳುವ ನೀತಿ, ಆ ಜಾತಿ, ಈ ಜಾತಿ, ಹೊಲಸು, ಕೊಳಕು ರಾಜಕೀಯ ಮಾಡುವವರಿಗೆ ಓಟು ಹಾಕಿ, ಗೆಲ್ಲಿಸಿ, ಕಳುಹಿಸಿ ಈಗ ಹಿಂದ ಒದರಾಡ್ಕೊಂತ ಕುಂದರ್ತಾರ.

ಶಿವಪುತ್ರ ಕುದರಿ.