ಹದಿ ಹರಿಯದರಲ್ಲಿ ಏಡ್ಸ್ ಜಾಗೃತಿ ಮೂಡಿಸಿ- ಗಂಗಾಧರ

ಕೋಲಾರ,ಡಿ.೨: ಪ್ರತಿಯೊಬ್ಬರು ಏಡ್ಸ್ ಖಾಯಿಲೆ ಹೇಗೆ ಹರಡುತ್ತದೆ, ಅದನ್ನು ತಡೆಗಟ್ಟುವುದು ಹೇಗೆ ಎಂಬುವುದರ ಬಗ್ಗೆ ತಿಳಿದುಕೊಂಡರೆ ಏಡ್ಸ್ ಖಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ಹದಿ ಹರಿಯದ ವಯಸ್ಸಿನವರಿಗೆ ಏಡ್ಸ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಹೆಚ್. ಗಂಗಾಧರ ಅವರು ತಿಳಿಸಿದರು.
ನಗರದ ಶ್ರೀ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೋಲಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳಾದ ಸಿ.ಎಚ್.ಸಿ. ಸಬ್ ಟ್ರಸ್ಟ್, ಸೌಖ್ಯ ಸಂಮೃದ್ದಿ ಸಂಸ್ಥೆ, ಐವೈಡಿ ಐಡಿಯು ಸಮ್ಮಿಳನ ಸಂಸ್ಥೆ ಕೋಲಾರ ಮತ್ತು ನರ್ಸಿಂಗ್ ಕಾಲೇಜು, ಪದವಿ ಹಾಗೂ ಪದವಿ ಪೂರ್ವ ಕಾಲೇಜು ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ-೨೦೨೧ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಸೇವಾ ಪ್ರಾಧಿಕಾರದಿಂದ ಏಡ್ಸ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉಚಿತ ಕಾನೂನು ನೆರವನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಏಡ್ಸ್ ಸೋಂಕಿತರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ದೊರೆಯುತ್ತಿದ್ದು, ಅದರ ಬಗ್ಗೆ ಅರಿವು ಮೂಡಿಸಿ ಸೌಲಭ್ಯಗಳನ್ನು ಒದಗಿಸುವಂತೆ ಮಾಡಬೇಕು. ಅರೆಕಾಲಿಕ ಸ್ವಯಂ ಸೇವಕಾರರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಜಗದೀಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಏಡ್ಸ್ ಪ್ರಕರಣವು ೪೦ ವರ್ಷಗಳ ಹಿಂದೆ ಪತ್ತೆಯಾಗಿದೆ. ಆದರೆ ಇದುವರೆಗೆ ಯಾವುದೇ ಲಸಿಕೆಯನ್ನು ಕಂಡು ಹಿಡಿದಿಲ್ಲ. ಏಡ್ಸ್ ಖಾಯಿಲೆಯು ಒಂದು ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ. ಸೋಂಕಿತ ವ್ಯಕ್ತಿ ಮಾತ್ರವಲ್ಲ ಆತನ ಕುಟುಂಬದ ಎಲ್ಲರೂ ನರಳುತ್ತಾರೆ. ಸಮಾಜದಲ್ಲಿ ಒಬ್ಬ ವ್ಯಕ್ತಿ ಗೌರವಿತವಾಗಿ ಬದುಕುಕಬೇಕು, ತನ್ನದಲ್ಲದ ತಪ್ಪಿಗೆ ಯಾವುದೇ ವ್ಯಕ್ತಿ ನೋವುಂಡಬಾರದು ಎಂದು ಅವರು ತಿಳಿಸಿದರು
ವಕೀಲರ ಸಂಘದ ಕಾರ್ಯದರ್ಶಿಗಳಾದ ರಘುಪತಿ ಗೌಡ ಅವರು ಮಾತನಾಡಿ, ಜನರಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸಬೇಕು. ಸಾರ್ವಜನಿಕರಲ್ಲಿ ಜ್ಞಾನದ ಬೆಳಕು ಮೂಡಿ ಮೂಡನಂಬಿಕೆ ಅಂತ್ಯವಾಗಿ ದೇಶವು ಅಭಿವೃದ್ದಿ ಹೊಂದಬೇಕು. ಏಡ್ಸ್ ಖಾಯಿಲೆಯನ್ನು ತಡೆಗಟ್ಟಲು ಜನ ಸಾಮಾನ್ಯರು ಸಹಕರಿಸಬೇಕು. ದೇಶದಲ್ಲಿ ಏಡ್ಸ್ ಪ್ರಕರಣಗಳು ಹೆಚ್ಚಿಗೆ ಕಂಡು ಬರಲು ಬಡತನ ಕಾರಣ, ಬಡತನದಿಂದ ಜನರು ಅಜಾಗೃತರಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಹಳ್ಳಿಗಳಲ್ಲಿ ಜನರಿಗೆ ಏಡ್ಸ್ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿಗಳಾದ ಡಾ ಎನ್.ಸಿ. ನಾರಾಯಣಸ್ವಾಮಿ ಅವರು ಮಾತನಾಡಿ. ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆಯಂತೆ ೧೯೮೮ ರಿಂದ ಪ್ರತಿ ವರ್ಷ ಡಿಸೆಂಬರ್ ೦೧ ರಂದು ವಿಶ್ವ ಏಡ್ಸ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಏಡ್ಸ್‌ನಿಂದ ಸೋಂಕಿತ ಹಾಗೂ ಕಳಂಕ ತಾರತಮ್ಯಕ್ಕೊಳಗಾದ ವ್ಯಕ್ತಿಗಳಿಗೆ ನೈತಿಕ ಬೆಂಬಲವನ್ನು ಸೂಚಿಸಲು. ಮರಣ ಹೊಂದಿದವರ ನೆನಪಿಗಾಗಿ ಮತ್ತು ಎಲ್ಲರೂ ಒಂದಾಗಿ ಏಡ್ಸ್ ವಿರುದ್ದ ಹೋರಾಡುವಂತೆ ಪ್ರೇರೇಪಿಸುವ ಸಲುವಾಗಿ ಆಚರಿಸಲಾಗುತ್ತಿದೆ. ಈ ವರ್ಷ ಅಸಮಾನತೆಗಳನ್ನು ಕೊನೆಗೊಳಿಸಿ. ಏಡ್ಸ್‌ನ್ನು ಕೊನೆಗೊಳಿಸಿ. ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ಎಂಬ ಘೋಷಣೆಯೊಂದಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಧಿಕಾರಿಗಳಾದ ಡಾ ರಮ್ಯಾ ದೀಪಿಕಾ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸರ್ವೇಕ್ಷಣಾಧಿಕಾರಿಗಳಾದ ಡಾ||ಚಾರಿಣಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಹೇಮಾಲತಾ, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರೇಮಾ, ವಕೀಲರಾದ ಚಲಪತಿ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.