ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಂಡೂರು: ಮಾ:23,  ಪಟ್ಟಣದ ಕೃಪಾನಿಲಯ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ವೈದ್ಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ರಾಷ್ಟ್ರೀಯ ಕಿಶೋರ ಸ್ವಾಸ್ಥ ಕಾರ್ಯಕ್ರಮದಡಿಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನವನ್ನು ಹಮ್ಮಿಕೊಳ್ಳಲಾಗಿತ್ತು.
ಆಪ್ತ ಸಮಾಲೋಚಕರಾದ ಪ್ರಶಾಂತ್ ಅವರು ಮಾತನಾಡಿ, ‘ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ ಎಂಬ ವಿಷಯವನ್ನು ಎಲ್ಲರೂ ತಿಳಿಯಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು. ಮಕ್ಕಳು ತಮ್ಮ ತಂದೆತಾಯಿಗಳು ಹಾಗೂ ಗುರುಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ದುಶ್ಚಟಗಳಿಗೆ ಒಳಗಾಗಬಾರದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ನೇಹಾ ಕ್ಲೀನಿಕ್ ತೆರೆಯಲಾಗಿದೆ. ಅಲ್ಲಿ ಆರೋಗ್ಯ ಸಮಸ್ಯೆಗಳಿದ್ದಲ್ಲಿ, ಕ್ಲಿನಿಕ್‍ಗೆ ಭೇಟಿ ನೀಡಿ ಆಪ್ತ ಸಮಾಲೋಚಕರ ಮೂಲಕ ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ’ ಎಂದರು.
ಮುಖ್ಯ ಶಿಕ್ಷಕಿ ಸಿಸ್ಟರ್ ಶೆರ್ಲಿ ಅವರು ಮಾತನಾಡಿ, ಆರೋಗ್ಯವೇ ಮಹಾಭಾಗ್ಯ ಎಂಬ ಮಾತಿನಂತೆ ಪ್ರತಿಯೊಬ್ಬರೂ ಉತ್ತಮ ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂದರು.
ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ತಾಲ್ಲೂಕು ಘಟಕದ ಖಜಾಂಚಿ ಮಹಮ್ಮದ್ ಜವೀದ್, ಶಾಲೆಯ ಗೈಡ್ಸ್ ಶಿಕ್ಷಕಿ ಯಾಸಿನಾ, ಸ್ಕೌಟ್ ಶಿಕ್ಷಕ ಎ. ಮರಿಸ್ವಾಮಿ ಉಪಸ್ಥಿತರಿದ್ದರು.
ಸಂಡೂರಿನ ಕೃಪಾನಿಲಯ ಶಾಲೆಯಲ್ಲಿ ಬುಧವಾರ ನಡೆದ ರಾಷ್ಟ್ರೀಯ ಕಿಶೋರ ಸ್ವಾಸ್ಥ ಕಾರ್ಯಕ್ರಮದಲ್ಲಿ ಆಪ್ತ ಸಮಾಲೋಚಕ ಪ್ರಶಾಂತ್ ಅವರು ಮಾತನಾಡಿದರು