ಹದಿಹರೆಯದವರಲ್ಲಿ ತಂಬಾಕಿನ ದುಷ್ಪರಿಣಾಮ ಕುರಿತು ಜಾಗೃತಿ ಅಗತ್ಯ

oppo_2

ಸಂಜೆವಾಣಿ ವಾರ್ತೆ
 ಚಿತ್ರದುರ್ಗ. ಜೂ.೧; 13 ರಿಂದ 14 ವರ್ಷದ ಹದಿಹರೆಯದ ಮಕ್ಕಳು ಕುತೂಹಲದಿಂದ ತಂಬಾಕು ಸೇವನೆ ಕಡೆ ಮುಖ ಮಾಡುತ್ತಾರೆ. ಇಂತಹ ಮಕ್ಕಳನ್ನು ಗುರುತಿಸಿ ಚಿಕತ್ಸೆ ನೀಡಿ, ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಉಜ್ವಲ ವೀರಣ್ಣ ಸಿದಣ್ಣವರ್ ಹೇಳಿದರು.ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಅಮೃತ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ, ಆಯೋಜಿಸಲಾದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಾಮಾನ್ಯ ವ್ಯಕ್ತಿಗಳು ತಂಬಾಕು ಸೇವನೆಯಿಂದಾಗುವ ಪರಿಣಾಮಗಳನ್ನು ಹೇಳಿದರೆ ವ್ಯಸನಿಗಳು ಕೇಳುವುದಿಲ್ಲ. ವೈದ್ಯರು ಹೇಳಿದರೆ ಕೇಳುತ್ತಾರೆ. ಇಂದು ವಿದ್ಯಾರ್ಥಿಗಳಾಗಿರುವ ನೀವು ಮುಂದೆ ವೈದ್ಯರಾಗಿ ರೋಗಿಗಳ ಸೇವೆ ಮಾಡುವಿರಿ. ಈ ಹಿನ್ನಲೆಯಲ್ಲಿ ಆರ್ಯುವೇದ ಕಾಲೇಜಿನಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.ತಂಬಾಕು, ಲಿಕ್ಕರ್, ಸಿಗರೇಟ್ ಸೇವನೆ ಮಾಡುವುದರಿಂದ ಆರೋಗ್ಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಇವುಗಳ ಸೇವನೆಯಿಂದ ಆರೋಗ್ಯ ಹದಗೆಡುತ್ತದೆ. ಈ ಬಗ್ಗೆ ತಂಬಾಕು ಉತ್ಪನ್ನಗಳ ಮೇಲೆ ಚಿತ್ರಗಳ ಸಹಿತ ಬಿತ್ತರಿಸಿದರೂ, ಸೇವನೆ ಮಾಡುತ್ತಿರುವುದು ದುರಂತ.ಚಲನಚಿತ್ರಗಳ ಪರಿಣಾಮಗಳಿಂದ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅನೇಕ ಮಕ್ಕಳು ತಂಬಾಕು, ಗಾಂಜಾ ಸೇವನೆ ಮಾಡಿ ಕಾನೂನು ಸಂಘರ್ಷಕ್ಕೆ ಸಿಲುಕುತ್ತಾರೆ. ಇವರನ್ನು ರಕ್ಷಿಸುವುದೇ ಈ ಬಾರಿಯ ವಿಶ್ವ ತಂಬಾಕು ರಹಿತ ದಿನದ ಘೋಷ ವಾಕ್ಯವಾಗಿದೆ. ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸೋಣ ಎಂದರು.ಜಿಲ್ಲಾಸ್ಪತ್ರೆಯ ದಂತ ವೈದ್ಯಧಿಕಾರಿ ಪ್ರಸನ್ನಕುಮಾರ್ ಮಾತನಾಡಿ, ತಂಬಾಕು ಉತ್ಪನ್ನಗಳನ್ನು ಉಪಯೋಗಿಸುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಗಾಢವಾದ ಪರಿಣಾಮ ಬೀರುತ್ತದೆ. ತಂಬಾಕು ಸೇವನೆ ಸಾಮಾಜಿಕ ಪಿಡುಗು ಎಂದರೆ ತಪ್ಪಾಗಲಾರದು. ತಂಬಾಕು ಹಾಗೂ ಇತರೆ ಗುಟ್ಕಾ ಸೇವನೆ ಕ್ರಮೇಣ ಚಟವಾಗಿ ಮಾರ್ಪಟ್ಟು, ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳಿಗೆ ತುತ್ತಾಗಬಹುದು. ಆದ್ದರಿಂದ ತಂಬಾಕು ಸೇವನೆಗಳ ಬಗ್ಗೆ ಇನ್ನೂ ಹೆಚ್ಚಿನ ಅರಿವು ಹೊಂದಬೇಕು.