(ಸಂಜೆವಾಣಿ ವಾರ್ತೆ)
ವಿಜಯಪುರ :ಜು.12: ಹದಿಹರೆಯ ಎನ್ನುವದು ಜೀವನದ ಅತ್ಯಂತ ವಿಚಿತ್ರವಾದ ಬೆಳವಣಿಗೆ ಹಂತವಾಗಿರುವುದರಿಂದ ಈ ಹಂತದಲ್ಲಿ ಪೋಷಕರ ಕುಟುಂಬದ ಬೆಂಬಲ ಅಗತ್ಯ ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವಿಜಯಪುರ ಜಾಲವಾದಿ ಹಾಸ್ಪಿಟಲ್‍ನ ಹೃದಯ ಮತ್ತು ಮಧುಮೇಹ ತಜ್ಞರಾದ ಡಾ. ವಿಶ್ವನಾಥ ಜಾಲವಾದಿ ಹೇಳಿದರು.
ಕೂಡಗಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಜಾಲವಾದಿ ಹಾಸ್ಪಿಟಲ್‍ನ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹದಿ ಹರಿಯದ ಅವಧಿ ಏರಿಳಿತಗಳಿಂದ ಕೂಡಿದ್ದು ವ್ಯಕ್ತಿ ಬಾಲ್ಯದ ಸುರಕ್ಷಿತ ಹಿಡಿತದಿಂದ ಪ್ರೌಢಿಮೆಯ ಕಡೆಗೆ ಹೆಜ್ಜೆ ಇಡುವುದಿರಂದ ನೂತನ ಭಾವನೆ, ದೈಹಿಕ ಬದಲಾವಣೆ, ಸಂಘರ್ಷ ಭಾವನೆಗಳ ತಾಕಲಾಟದಿಂದ ಕೂಡಿರುವುದರಿಂದ ಪಾಲಕರ, ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.
ಅಧ್ಯಕ್ಷ ಸ್ಥಾನ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಕೆ.ಜಿ.ಲಮಾಣಿ ಮಾತನಾಡಿ, ನಮ್ಮ ದೇಹದ ರಚನೆ ಹೇಗಿದೆ ಎಂದರೆ ಏನಾದರೂ ಆಗುವ ಮೊದಲು ಅದು ಸೂಚನೆ ಕೊಡುತ್ತಿರುತ್ತದೆ. ಈ ಪ್ರಕೃತಿ ಕೊಟ್ಟು ಕಳುಹಿಸಿದ ಕಾರ್ಮೋಡಗಳು ಕೇವಲ ನಾಲ್ಕಾರು. ಆದರೆ ನಾವಾಗಿಯೇ ಸೃಷ್ಟಿಮಾಡಿಕೊಂಡಿರುವುದು ಸಾವಿರಾರು. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಿ ಉತ್ತಮ ಆರೋಗ್ಯವಿಟ್ಟುಕೊಂಡು ಗುರಿ ಮುಟ್ಟಬೇಕು ಎಂದರು.
ಜಾಲವಾದಿ ಹಾಸ್ಪಿಟಲ್‍ನ ಶಂಕರ ಸಂಗೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಎಸ್.ಬಿ.ದೇಸಾಯಿ ಸ್ವಾಗತಿಸಿದರು. ಶ್ರೀ ವ್ಹಿ.ಜಿ. ಕಿವುಡಜಾಡರ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯ ಮೇಲೆ ಉಪನ್ಯಾಸಕರಾದ ಬಸವರಾಜ ಜಾಲವಾದಿ, ಶಾಂತಾಬಾಯಿ ಕಾಮನಕೇರಿ, ಶ್ರವಣ ಹೂಗಾರ, ಐಶ್ವರ್ಯ ಇವಣಗಿ, ನೌಶಿನ ಮಕಾಂದಾರ ಉಪಸ್ಥಿತರಿದ್ದರು.