ಹದಡಿಯಲ್ಲಿ ಬೆಂಕಿ ಅವಘಡ;  ಹುಲ್ಲಿನ ಬಣವೆ ಭಸ್ಮ

ಸಂಜೆವಾಣಿ ವಾರ್ತೆ

ದಾವಣಗೆರೆ. ಸೆ.೯; ಬೆಂಕಿ ಅವಘಡದಿಂದ ಜೂಜಿನ ಪೈಲ್ವಾನ್ ಕುರಿ, ಭತ್ತದ ಹುಲ್ಲಿನ ಬಣವೆ ಮತ್ತು ತ್ರಿಚಕ್ರದ ಸ್ಕೂಟರ್ ಭಸ್ಮವಾಗಿದ್ದು ಲಕ್ಷಾಂತರ ರೂ ಮೌಲ್ಯದಷ್ಟು ಹಾನಿಯಾಗಿರುವ ಘಟನೆ ತಾಲ್ಲೂಕಿನ ಹದಡಿ ಗ್ರಾಮದಲ್ಲಿ ನಡೆದಿದೆ.ಕಳೆದ ಮಧ್ಯೆ ರಾತ್ರಿ ಸುಮಾರು 2 ಗಂಟೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ತಕ್ಷಣ ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ.ಹದಡಿ ಗ್ರಾಮದ ಗಿಡ್ಡಜ್ಜರ ಮಲ್ಲಿಕಾರ್ಜುನಪ್ಪನವರಿಗೆ ಸೇರಿದ ಗೋದಾಮು, ಮರದ ಮುಟ್ಟು, ಕರಿಮಾಳ್ಳರ ಮಂಜಪ್ಪನ ಪೈಲ್ವಾನ್ ಕುರಿ, ಎಂ ಡಿ ನಿಂಗಪ್ಪನ ಭತ್ತದ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದೆ.ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್  ಭೇಟಿ ನೀಡಿ, ತಹಶೀಲ್ದಾರ್ ಡಾ.ಅಶ್ವಥ್ ರವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರ ನೊಂದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ತಕ್ಷಣ ತಹಶೀಲ್ದಾರ್ ಡಾ.ಅಶ್ವಥ್, ರೆವೆನ್ಯೂ ಇನ್ಸ್ಪೆಕ್ಟರ್ ಬಸವರಾಜಪ್ಪ, ಪಶು ವೈದ್ಯಾಧಿಕಾರಿ ಹೇಮಂತಕುಮಾರ್  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸುವ ಭರವಸೆ ನೀಡಿದರು. ಹದಡಿ ಠಾಣೆ ಸಬ್ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಈ ಸಂದರ್ಭದಲ್ಲಿ ಕೊಳೇನಹಳ್ಳಿ ಬಿ ಎಂ ಸತೀಶ್, ಹದಡಿ ಗ್ರಾಮದ ಮುಖಂಡರಾದ ಎಂ ಡಿ ನಿಂಗಪ್ಪ, ಟಿ ಬಿ ಮಹಾಂತೇಶ, ಜಿ ಸಿ ನಾಗರಾಜ್, ಎ ಹೆಚ್ ನಾಗರಾಜ್, ಜಿ ಸಿ ಬಸವರಾಜಪ್ಪ, ಆರ್ ಬಿ ಹನುಮಂತಪ್ಪ, ಪಂಚಾಯಿತಿ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.