ಹದಗೆಟ್ಟ ರಸ್ತೆ: ವಿದ್ಯಾರ್ಥಿನಿಯರಿಂದ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು20 : ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ನೂರಾರು ವಿದ್ಯಾರ್ಥಿನಿಯರು ಬುಧವಾರ ದಿಢೀರನೆ ಪುರಸಭೆಗೆ ದೌಡಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಸುತ್ತಮುತ್ತಲಿನ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಅಕ್ಷರಭ್ಯಾಸ ಮಾಡುತ್ತಿದ್ದಾರೆ.
ಗ್ರಾಮಾಂತರ ಪ್ರದೇಶದಿಂದ ಬರುವ ನೂರಾರು ವಿದ್ಯಾರ್ಥಿನಿಯರು ಹಳೆ ಬಸ್ ನಿಲ್ದಾಣದಲ್ಲಿ ಇಳಿದು ರವಿ ಟಾಕೀಸ್ ನ ಎದುರುನ ರಸ್ತೆಯನ್ನು ಬಳಸಿ ನೇರವಾಗಿ ಶಾಲೆಗೆ ಬರುತ್ತಾರೆ ಆದರೆ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ದುರಸ್ತಿ ಮಾಡುವಂತೆ ಅನೇಕ ಬಾರಿ ಸ್ಥಳೀಯ ಪುರಸಭೆಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಜಿಟಿಜಿಟಿ ಮಳೆಯಿಂದಾಗಿ ಈ ರಸ್ತೆಯು ಕೊಚ್ಚೆಯಾಗಿ ಅಡ್ಡಾಡಬಾರದು ಅಂತ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ರೋಸಿ ಹೋದ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಘೋಷಣೆಗಳನ್ನು ಕೂಗುತ್ತಾ ಪುರಸಭೆಗೆ ಬಂದು ಪ್ರತಿಭಟನೆ ನಡೆಸಿದರು.
ಆಡಳಿತ ಮಂಡಳಿಯ ಅಧ್ಯಕ್ಷರೇ ಪುರಸಭೆಗೆ ಮನವಿ ಬರೆದು ಸಲ್ಲಿಸಿದ್ದು ಈ ಮನವಿ ಪತ್ರವನ್ನು ಶಾಲಾ ಸಿಬ್ಬಂದಿ ಬುಧವಾರ ಪುರಸಭೆಯ ವ್ಯವಸ್ಥಾಪಕಿ ಮಂಜುಳಾ ಹೂಗಾರವರಿಗೆ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿದ ಅವರು ಮುಖ್ಯ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.