ಹದಗೆಟ್ಟ ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ : ಚವ್ಹಾಣ

ಕಾಳಗಿ. ಅ.1 : ತಾಲೂಕಿನ ಗೋಟೂರ ಚಿಂಚೋಳಿ (ಎಚ್ ) ಮಾರ್ಗದ ರಸ್ತೆ ಮಳೆಗೆ ಕೊಚ್ಚಿ ಹೋಗಿ ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರ ಜನಪ್ರತಿನಿಧಿಗಳು ದುರಸ್ತಿಗೆ ಮುಂದಾಗದೆ ಇರುವುದರಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿ ಸಾರ್ವಜನಿಕರು ದಿನ ನಿತ್ಯ ಪರದಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸಂದೀಪ ಚವ್ಹಾಣ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಮೇಲಿನ ಡಾಂಬರ ಮಳೆ ನೀರಿನ ರಭಸಕ್ಕೆ ಕಿತ್ತು ಹೋದಾಗ ಅಧಿಕಾರಿಗಳು ತಾತ್ಕಾಲಿಕವಾಗಿ ಮುರುಮ್ ಹಾಕಿ ದುರಸ್ತಿ ಮಾಡುತ್ತಿದ್ದರು.
ಈ ವರ್ಷವೂ ಕೂಡ ಅತಿಯಾದ ಮಳೆ ಆದ ಕಾರಣ ಹಳ್ಳಗಳು ತುಂಬಿ ಹರಿದು ರಸ್ತೆ ಕೊಚ್ಚಿಕೊಂಡು ಹೋಗಿ ಆಳವಾದ ತೆಗ್ಗುಗಳು ಬಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದಾಗಿದೆ.

ರಸ್ತೆ ಮಧ್ಯದಲ್ಲಿ ಆಳವಾದ ತಗ್ಗು ಬಿದ್ದಿರುವುದರಿಂದ ಬಸ್, ಕಾರು,ಲಾರಿ ಸೇರಿದಂತೆ ಇತರೆ ವಾಹನ ಸಂಚಾರಕ್ಕೆ ಬಾರದಂತಾಗಿ ರಸ್ತೆ ಸಂಪೂರ್ಣ ಬಂದ್ ಆಗಿದೆ. ದಿನನಿತ್ಯ ಸಂಚಾರ ಮಾಡುವ ನೂರಾರು ದ್ವಿಚಕ್ರ ವಾಹನ ಪ್ರಯಾಣಿಕರು ಪರ್ಯಾಯ ವವಸ್ಥೆ ಇಲ್ಲ ಕಾರಣ ತಮ್ಮ ಜೀವವನ್ನು
ಕೈಯಲ್ಲಿ ಹಿಡಿದುಕೊಂಡು ಈ ರಸ್ತೆ ಮಾರ್ಗವಾಗಿ ಹೋಗುತ್ತಿದ್ದಾರೆ. ಗೋಟೂರ ಹಾಗೂ ಚಿಂಚೋಳಿ (ಎಚ್ ) ಮಧ್ಯ ಸಂಪರ್ಕ ಕಡಿತವಾಗಿದೆ.

ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರವಾಗಿ ಈ ಜಮೀನಿನ ಮಾಲೀಕರು ಕೋರ್ಟನಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಕಾರಣ ನೀಡಿ ತಮ್ಮ ಜವಾಬ್ದಾರಿಯಿಂದ ಕೈತೊಳೆದುಕೊಳ್ಳುತ್ತಿದ್ದಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳು ಕೂಡಲೇ ಮಧ್ಯಪ್ರವೇಶಿಸಿ ಜಮೀನು ಮಾಲೀಕರೊಂದಿಗೆ ಚರ್ಚಿಸಿ ಹಾಗೂ ಕಾನೂನು ತಜ್ಞರಿಂದ ಸಲಹೆ ಹೊಡೆದು ಈ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಸಂದೀಪ ಚವ್ಹಾಣ ಆಗ್ರಹಿಸಿದ್ದಾರೆ.