ಹದಗೆಟ್ಟ ರಸ್ತೆಯಲ್ಲಿ ಬಾಳೆ, ತೆಂಗು ನೆಟ್ಟು ಪ್ರತಿಭಟನೆ

ಬೆಂಗಳೂರು, ಸೆ. ೮- ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಆಚಾರ್ಯ ಕಾಲೇಜು ರಸ್ತೆಯಿಂದ ತಮ್ಮೇನಹಳ್ಳಿ ಕಡೆಗೆ ಹೋಗುವ ಗಣಪತಿನಗರ ರಸ್ತೆ ಗುಂಡಿಮಯವಾಗಿದ್ದು ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಮನಕ್ಕೆ ತಂದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಕೆಸರು ಗದ್ದೆಯಂತಾಗಿದ್ದ ರಸ್ತೆಯಲ್ಲಿ ಬಾಳೆ, ತೆಂಗು ಹಾಗೂ ಭತ್ತ ಸಸಿ ನೆಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಕೆಲ ನಿಮಿಷ ರಸ್ತೆ ತಡೆ ಸಹ ನಡೆಸಲಾಯಿತು.
ಈ ಮೊದಲು ಹಾಕಿದ್ದ ಕಳಪೆ ಕಾಂಕ್ರೀಟ್ ರಸ್ತೆ ದುಸ್ಥಿತಿ ತಲುಪಿದ್ದು ಕಂಬಿಗಳು ನರಬಲಿಗಾಗಿ ಬಾಯ್ತೆರೆದು ನಿಂತಿವೆ.ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಗುಂಡಿಗಳು ತುಂಬಿ ರಸ್ತೆ ಕಾಣದೆ ಹತ್ತಾರು ಜನ ಬಿದ್ದು ಎದ್ದು ಹೋಗುವ ಸನ್ನಿವೇಶಗಳು ಸಾಮಾನ್ಯವಾದರೂ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.ಸ್ಥಳೀಯ ಶಾಸಕ ಮಂಜುನಾಥ್ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಸದರಿ ರಸ್ತೆ ದುರಾವಸ್ಥೆ ತಲುಪಿ ಐದಾರು ತಿಂಗಳಾದರೂ ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.ಈ ಹಿಂದೆ ಹಾಕಿದ್ದ ಕಾಂಕ್ರೀಟ್ ರಸ್ತೆ ಸಂಪೂರ್ಣ ಹಾಳಾಗಿದ್ದು ಒಳಗಿನ ಕಂಬಿಗಳು ಕಿತ್ತುಕೊಂಡು ನರಬಲಿಗಾಗಿ ಕಾಯುವಂತಿವೆ.ಆಚಾರ್ಯ ಕಾಲೇಜು ರಸ್ತೆಯಿಂದ ಅಂದಾನಪ್ಪ ಬಡಾವಣೆವರೆಗೆ ರಸ್ತೆ ಸಂಪೂರ್ಣ ಕಿತ್ತುಹೋಗಿದ್ದು ಶಾಲೆಗಳಿಗೆ ತಿರುಗಾಡುವ ಮಕ್ಕಳ ಸ್ಥಿತಿ ಹೇಳತೀರದು.ಈಗ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ರಸ್ತೆಯ ಗುಂಡಿಗಳು ತುಂಬಿಕೊಂಡು ಪಾದಚಾರಿಗಳು ಹಾಗೂ ವಾಹನ ಸಂಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.
ಈ ಹದಗೆಟ್ಟ ಪರಿಸ್ಥಿತಿ ಖಂಡಿಸಿ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಸಮಿತಿ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ರಸ್ತೆ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಸ್ಥಳೀಯ ನೂರಾರು ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸೋಲದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮನವೊಲಿಸುವಲ್ಲಿ ಯಶಸ್ವಿಯಾದರು.
ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು.ಗಾಯಗೊಂಡಿರುವ ವ್ಯಕ್ತಿಗೆ ಆಸ್ಪತ್ರೆ ವೆಚ್ಚ ಭರಿಸಬೇಕು.