ಹದಗೆಟ್ಟ ರಸ್ತೆಯನ್ನು ಡಾಂಬರೀಕರಣಗೊಳಿಸಲು ಆಗ್ರಹ

ಶಿರಹಟ್ಟಿ,ಜು.19: ತಾಲೂಕಿನಾದ್ಯಂತವಾಗಿ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿದ್ದು, ಶಿರಹಟ್ಟಿ-ಬೆಳ್ಳಟ್ಟಿ ರಸ್ತೆ ಪಟ್ಟಣದ ಹತ್ತಿರ ಗುಂಡಿಗಳಿದ್ದು, ಇದ್ದ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣಗೊಳಿಸಬೇಕೆಂದು ಅಗ್ರಹಿಸಿ ಕರವೇ ಶಿರಹಟ್ಟಿ ತಾಲೂಕ ಘಟಕದ ಕಾರ್ಯಕರ್ತರು ತಹಶೀಲ್ದಾರವರಿಗೆ ಮನವಿ ಸಲ್ಲಿಸಿದರು.
ಅವರು ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ರಸ್ತೆಗಳ ಸುಧಾರಣೆ ಕ್ರಮ ಜರುಗಿಸುವಂತೆ ಒತ್ತಯಿಸಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಶಿರಹಟ್ಟಿ ಪಟ್ಟಣದಿಂದ ಒಂದು ಕಿಮಿ ಹತ್ತಿರದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ರಸ್ತೆ ಎಲ್ಲಿದೆ ಎಂದು ಹುಡಕಬೇಕಿದೆ. ಈ ಭಾಗದಲ್ಲಿ ಸರಕಾರಿ ಪಿಯು ಕಾಲೇಜು ಇದ್ದು, ವಿದ್ಯಾರ್ಥಿಗಳು ಸುಲಭವಾಗಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳಲ್ಲಿ ಬೃಹದಾಕಾರದ ಗುಂಡಿಗಳು ಇದ್ದು ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ನೋವನ್ನು ಅನುಭವಿಸುವಂತಾಗಿದೆ. ಕಳೆದ ಎರೆಡು ವರ್ಷಗಳಿಂದ ಇದೇ ಸ್ಥಿತಿ ಇದ್ದು, ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಜರುಗಿಸದೇ ಹೋದರೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ತಾಲೂಕಾದ್ಯಕ್ಷ ಬಸವರಾಜ ವಡವಿ ಅಗ್ರಹಿಸಿದ್ದಾರೆ,
ಶಾಲಾ-ಕಾಲೇಜು ಸಮಯಕ್ಕೆ ಬಸ್ ಸೌಕರ್ಯ ಒದಗಿಸಿ: ಶಿರಹಟ್ಟಿ ಪಟ್ಟಣದ ಬಸ್ ಡಿಪೋ ಆರಂಭವಾಗಿದ್ದರೂ ಕೂಡಾ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಅಗಮಿಸುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಇರದೇ ಕಾರಣ ತೊಂದರೆ ಅನುಭವಿಸುವಂತಾಗಿದೆ ಶಾಲಾ_ಕಾಲೇಜು ಸಮಯಕ್ಕೆ ಬಸ್‍ಗಳ ಸೌಕರ್ಯ ಒದಗಿಸಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಕರವೇ ತಾಲೂಕಾ ಉಪಧ್ಯಕ್ಷ ದೇವೇಂದ್ರ ಶಿಂದೆ,ಇಂತಿಯಾಜ ಪಟ್ಟಗಾರ, ಅನ್ವರ ಬರದ್ವಾಡ, ಹಸನಲಿ ಮನಿಯಾರ, ಜಾವೀದ ಕೋಳಿವಾಡ, ಈರಣ್ಣ ಗಂಟಿ ಮುಂತಾದವರು ಉಪಸ್ಥಿತರಿದ್ದರು.