ಲಕ್ಷ್ಮೇಶ್ವರ,ಜೂ30: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ವತಿಯಿಂದ ಕರ್ನಾಟಕ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇದರ ಮುಖಾಂತರ ಯೋಜನಾ ವಿಭಾಗದಿಂದ ಅಂದರೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ನಿರ್ಮಿಸಿದ ಕೊಂಡಿಕೊಪ್ಪ ಹರದಗಟ್ಟಿ ಮಧ್ಯದ ರಸ್ತೆ ಕೇವಲ ಎರಡೇ ವರ್ಷದಲ್ಲಿ ಎಲ್ಲೆಂದರಲ್ಲಿ ಕಿತ್ತು ಹೋಗಿದೆ.
ಕೊಂಡಿಕೊಪ್ಪ ಕ್ರಾಸಿನಿಂದ ಹರದಗಟ್ಟಿಯವರೆಗೆ ಸುಮಾರು 2.17 ಕಿ.ಮೀ. ರಸ್ತೆಯನ್ನು ನಿರ್ಮಿಸಿದ್ದು ಇದರಲ್ಲಿ ಕೆಲವು ಭಾಗ ಸಿಮೆಂಟ್ ರಸ್ತೆ ಇನ್ನುಳಿದ ಭಾಗ ಡಾಂಬರೀಕರಣ ಮಾಡಲಾಗಿದೆ ಆದರೆ ಈ ರಸ್ತೆಯ ಸ್ಥಿತಿ ಈಗ ಹಾಳಾಗುವ ಹಂತಕ್ಕೆ ಬಂದಿದೆ.
ಸನ್ 2020 21ನೇ ಸಾಲಿನಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಸಿಸಿ ರಸ್ತೆ ಬಿರುಕು ಬಿಟ್ಟಿದ್ದರೆ ಡಾಂಬರೀಕರಣದ ರಸ್ತೆ ಎಲ್ಲೆಂದರಲ್ಲಿ ಕಿತ್ತು ಕಲ್ಲುಗಳು ಹೊರಬಂದು ದೊಡ್ಡ ದೊಡ್ಡ ಗುಂಡಿಗಳು ಕಾಣತೊಡಗಿವೆ.
ಬಹುತೇಕ ಪಿಎಂಜಿಎಸ್ ವೈ ಯೋಜನೆ ಅಡಿ ನಿರ್ಮಿಸಿರುವ ಎಲ್ಲ ರಸ್ತೆಗಳು ಎರಡೇ ವರ್ಷಗಳಲ್ಲಿ ಕಿತ್ತು ಕೆನಾಲಿ ಸೇರುತ್ತಿದ್ದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕಳಪೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.